ಹಾಸ್ಟೆಲ್‌ನಲ್ಲಿ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ – ಡೆತ್ ನೋಟ್ ಪತ್ತೆ
A medical student pursuing MD Radiology died by suicide in the SIMS hostel . Police found a death note and investigation is underway.
ಶಿವಮೊಗ್ಗ, ಜನವರಿ 8: ಶಿವಮೊಗ್ಗದ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ (ಸಿಮ್ಸ್) ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 7ರಂದು ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆಯ ಮಧುಗಿರಿ ಮೂಲದ ಸಂದೀಪ್ ರಾಜ್ (28) ಮೃತ ವಿದ್ಯಾರ್ಥಿಯಾಗಿದ್ದು, ಅವರು ಸಿಮ್ಸ್‌ನಲ್ಲಿ ಎಂಡಿ ರೇಡಿಯಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಭದ್ರಾ ವಸತಿ ಗೃಹದ ಮೂರನೇ ಮಹಡಿಯಲ್ಲಿರುವ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸಂಜೆ ವೇಳೆ ಸಹಪಾಠಿಗಳಿಗೆ ಅನುಮಾನ ಉಂಟಾಗಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಡೆತ್ ನೋಟ್ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಂದೀಪ್ ರಾಜ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಹಾಗೂ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



