A Shivamogga court sentenced a youth to 20 years of rigorous imprisonment and imposed a ₹50,000 fine for raping a minor under the POCSO Act. Compensation ordered to victim’s family.
ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1) ತೀರ್ಪು ನೀಡಿದೆ.
2022ನೇ ಸಾಲಿನಲ್ಲಿ ಶಿವಮೊಗ್ಗ ಗ್ರಾಮಾಂತರ ತಾಲ್ಲೂಕಿನ ವಾಸಿ 21 ವರ್ಷದ ಯುವಕನು 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿ ಕುಂಸಿ ಪೊಲೀಸ್ ಠಾಣೆ ಪಿಐ ಅಭಯ್ ಪ್ರಕಾಶ್ ಸೋಮನಾಳ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(ಎಫ್.ಟಿ.ಎಸ್.ಸಿ-1) ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ನಿಂಗನಗೌಡ ಭ. ಪಾಟೀಲ್ ಅವರು ಆರೋಪಿಗೆ 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 50,000 ರೂ ದಂಡ, ಹಾಗೂ ದಂಡ ಕಟ್ಟಲುವಿಫಲನಾದಲ್ಲಿ 3 ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.
ಪ್ರಕರಣದಲ್ಲಿನ ನೊಂದ ಬಾಲಕಿಯು ಮೃತಪಟ್ಟಿದ್ದು, ಘನ ನ್ಯಾಯಾಲಯವು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನೊಂದ ಬಾಲಕಿಯ ತಾಯಿಗೆ 4,00,000 ರೂ. ಪರಿಹಾರವಾಗಿ ನೀಡಲು ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ವಾದ ಮಂಡಿಸಿದ್ದರು.
