POSTMANNEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರ : ನಿಯಂತ್ರಣ ತಪ್ಪಿದ ಬೈಕ್‌ ಹಿನ್ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕ ಸಾವು

A retired headmaster died after his bike lost control and fell into backwaters from a bridge near Nagar in Hosanagar taluk, Shivamogga. Police have registered a case.

ಶಿವಮೊಗ್ಗ: ಸೇತುವೆ ಮೇಲೆ ಬೈಕ್ ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಹಿನ್ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕನೊಬ್ಬ ಸಾವನ್ನಪ್ಪಿದ ದುರ್ಘಟನೆ ಹೊಸನಗರ ತಾಲೂಕಿನ ನಗರ ಸಮೀಪದ ಸೋಮವಾರಪೇಟೆ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಸಂಪೇಕಟ್ಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕೆಲ ತಿಂಗಳ ಹಿಂದಷ್ಟೇ ನಿವೃತ್ತರಾಗಿದ್ದ ಗಣೇಶ್ (61) ಮೃತ ದುರ್ದೈವಿ. ಶನಿವಾರ ಬೆಳಗ್ಗೆ ಪತ್ನಿ ವೀಣಾರನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ಅರಮನೆಕೊಪ್ಪ ಗ್ರಾಮ ಪಂಚಾಯತಿಗೆ ಬಿಟ್ಟು ನಗರಕ್ಕೆ ವಾಪಸ್ಸಾಗಿದ್ದರು. ನಂತರ ಕಾರ್ಯನಿಮಿತ್ತ ಬಸವನಬ್ಯಾಣದ ಕಡೆ ತೆರಳುವ ವೇಳೆ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ.

ಹಿನ್ನೀರಿನಲ್ಲಿ ಬೈಕ್ ಹಾಗೂ ವ್ಯಕ್ತಿಯ ಮೃತದೇಹ ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಉಕ್ಕಡದ ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಬೈಕ್ ಅನ್ನು ಮೇಲಕ್ಕೆತ್ತಲಾಗಿದೆ.

ಬಿದನೂರು ಮಾರಿಕಾಂಬಾ ಜಾತ್ರೆ ನಡೆಯುತ್ತಿದ್ದು ಶನಿವಾರ ಕೊನೆಯ ದಿನವಾಗಿತ್ತು. ಬೆಳಗ್ಗೆಯಷ್ಟೇ ಗಣೇಶ್ ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ದೇವಸ್ಥಾನಕ್ಕೆ ಸಮೀಪದಲ್ಲೇ ಮೃತರ ನಿವಾಸವಿದ್ದು, ಈ ದುರ್ಘಟನೆ ಕುಟುಂಬಸ್ಥರಲ್ಲಿ ಆಕ್ರಂದನ ಮೂಡಿಸಿದೆ.

ಈ ಕುರಿತು ಮೃತರ ಪತ್ನಿ ವೀಣಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author

Exit mobile version