POSTMANNEWS

ನೈಜ ಸುದ್ದಿ ನೇರ ಬಿತ್ತರ..

ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಎಚ್ಚರಿಕೆ: ಹರತಾಳು ಹಾಲಪ್ಪ

Former minister Haratallu Halappa issues a legal notice to Sagar MLA Belluru Gopalakrishna over alleged false statements on Siganduru Temple, warning of a ₹5 crore defamation lawsuit.

ಬೆಂಗಳೂರು: ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿರುವುದಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಿಳಿಸಿದ್ದಾರೆ. ಸಮರ್ಪಕ ಉತ್ತರ ನೀಡದಿದ್ದಲ್ಲಿ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಅವರು ಎಚ್ಚರಿಸಿದರು.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ಅವರು ಪದೇಪದೇ ಸಿಗಂದೂರು ದೇವಸ್ಥಾನದ ವಿಚಾರವನ್ನು ಉಲ್ಲೇಖಿಸಿ, ತಾನು ಶಾಸಕರಾಗಿದ್ದಾಗ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಪ್ರಯತ್ನಿಸಿದ್ದೆನೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. “ನಾನು ಯಾವತ್ತೂ ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವುದಾಗಲಿ, ಸರ್ಕಾರದ ವಶಕ್ಕೆ ಪಡೆಯುವುದಾಗಲಿ ಯೋಚನೆಯಲ್ಲೂ ಮಾಡಿಲ್ಲ. ಆ ರೀತಿಯ ಯಾವುದೇ ಪ್ರಯತ್ನ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.ತಮ್ಮ ಕುಟುಂಬ ಪೀಳಿಗೆಗಳಿಂದಲೂ ಸಿಗಂದೂರು ದೇವಸ್ಥಾನದ ಭಕ್ತರಾಗಿದ್ದು, ತಾವೂ ಭಕ್ತರಾಗಿದ್ದಾಗಿ ಹೇಳಿದ ಅವರು, ಸಮಯ ಬಂದಾಗಲೆಲ್ಲ ದೇವಸ್ಥಾನದ ಪರವಾಗಿ ನಿಂತಿದ್ದೇನೆ ಎಂದರು.

“ನನ್ನ ನಿಲುವು ದೇವಸ್ಥಾನದ ಆಡಳಿತ ಮಂಡಳಿ ಪರವಾಗಿಯೂ ಅಲ್ಲ, ಭಟ್ಟರ ಪರವಾಗಿಯೂ ಅಲ್ಲ. ಎಲ್ಲರ ಪರವಾಗಿ ದೇವಸ್ಥಾನ ಉಳಿಯಬೇಕು, ಬೆಳೆಯಬೇಕು ಎಂಬ ಉದ್ದೇಶ ಮಾತ್ರ ನನ್ನದು. ಸರ್ಕಾರ ಅಥವಾ ಮುಜರಾಯಿ ವಹಿಸಿಕೊಳ್ಳಬೇಕೆಂದು ನಾನು ಎಂದಿಗೂ ಹೇಳಿಲ್ಲ” ಎಂದು ಹೇಳಿದರು.

ತಾನು ಈ ಆರೋಪಗಳನ್ನು ಖಂಡಿಸಿದರೂ ಕೂಡ, ಗೋಪಾಲಕೃಷ್ಣ ಅವರು ವಿವಿಧ ಪತ್ರಿಕೆಗಳನ್ನು ಉಲ್ಲೇಖಿಸಿ ಮತ್ತೆ ಮತ್ತೆ ಇದೇ ವಿಷಯ ಹೇಳುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆರೋಪಿಸಿದರು. ಇದರಿಂದ ದೇವಸ್ಥಾನದ ಭಕ್ತರು, ಅರ್ಚಕರು, ಆಡಳಿತ ಮಂಡಳಿ ಹಾಗೂ ಧರ್ಮದರ್ಶಿಗಳಲ್ಲಿ ತಮ್ಮ ಬಗ್ಗೆ ತಪ್ಪು ಭಾವನೆ ಮೂಡಿಸಿ, ತಮ್ಮ ಮಾನಹಾನಿ ಮಾಡುವ ಉದ್ದೇಶ ಸ್ಪಷ್ಟವಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಕಾನೂನು ಕ್ರಮವಾಗಿ ನೋಟಿಸ್ ನೀಡಿರುವುದಾಗಿ ತಿಳಿಸಿದ ಅವರು, “5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದು ಅಥವಾ ಷರತ್ತು ರಹಿತವಾಗಿ ಕ್ಷಮೆ ಕೇಳುವುದು, ಇಲ್ಲವೇ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರ ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದೇನೆ” ಎಂದು ಹೇಳಿದರು.

ರಾಜಕೀಯ ಹಾಗೂ ಅಭಿವೃದ್ಧಿ ವಿಷಯಗಳಲ್ಲಿ ಸುಳ್ಳು ಹೇಳುವವರಿದ್ದಾರೆ. ಆದರೆ ದೇವರ ವಿಚಾರದಲ್ಲಿ ಸುಳ್ಳು ಹೇಳುವುದು ಅಕ್ಷಮ್ಯ. ಅದಕ್ಕಾಗಿಯೇ ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ ಎಂದು ಹರತಾಳು ಹಾಲಪ್ಪ ಹೇಳಿದರು.

About The Author

Exit mobile version