An elderly couple was found dead under suspicious circumstances in Bhadravati, Karnataka. Gold ornaments were reported missing. Police have launched an intensive investigation.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ತರಿಕೆರೆ ರಸ್ತೆಯ ಸೀರಾಕ್ ಹೋಟೆಲ್ ಹಿಂಭಾಗದ ಭೂತನಗುಡಿ ಬಡಾವಣೆಯಲ್ಲಿ ವಾಸವಾಗಿದ್ದ ವಯೋವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮೃತರ ಮನೆಯಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಪ್ರಕರಣಕ್ಕೆ ಇನ್ನಷ್ಟು ಗಂಭೀರತೆ ತಂದಿದೆ.
ಮೃತರನ್ನು ವಿಐಎಸ್ಎಲ್ ನಿವೃತ್ತ ನೌಕರ ವೇಗ ನಡಿಗೆಯ ಚಂದ್ರಪ್ಪ (78) ಮತ್ತು ಅವರ ಪತ್ನಿ ಜಯಮ್ಮ (75) ಎಂದು ಗುರುತಿಸಲಾಗಿದೆ. ಜಯಮ್ಮ ಅವರ ಕತ್ತಿನಲ್ಲಿದ್ದ ಬಂಗಾರದ ಚೈನ್ ಸೇರಿದಂತೆ ಮನೆಯಲ್ಲಿದ್ದ ಇತರೆ ಒಡವೆಗಳು ಕಾಣೆಯಾಗಿವೆ. ಆದರೆ ದಂಪತಿಯ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲವೆಂದು ಅವರ ಮಕ್ಕಳು ತಿಳಿಸಿದ್ದಾರೆ.
ಚಂದ್ರಪ್ಪ–ಜಯಮ್ಮ ದಂಪತಿ ಪ್ರತಿದಿನ ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವ ಅಭ್ಯಾಸ ಹೊಂದಿದ್ದರು. ಇವರಿಗೆ ಶಿವಮೊಗ್ಗದ ಚೀಲೂರು ಎನ್ಇಎಸ್ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಆದರ್ಶ್, ನಗರದ ಸಿದ್ದಾಪುರ–ಹೊಸೂರು ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ರವಿಕುಮಾರ್ ಹಾಗೂ ದಾವಣಗೆರೆ ಶುಗರ್ಸ್ನಲ್ಲಿ ಲೆಕ್ಕಾಧಿಕಾರಿಯಾಗಿರುವ ವಿಶ್ವನಾಥ್ ಎಂಬ ಮೂರು ಮಕ್ಕಳು ಇದ್ದಾರೆ.
ಕಳೆದ ಶನಿವಾರ ಆದರ್ಶ್ ಹಾಗೂ ಕುಟುಂಬಸ್ಥರು ಮನೆಗೆ ಬಂದು ಹೋಗಿದ್ದರು. ಸೋಮವಾರ ದಂಪತಿ ಹೊಸದಾಗಿ ಚಿನ್ನಾಭರಣ ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಮಾಹಿತಿ ಪಡೆದ ತಕ್ಷಣ ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ಯಪ್ಪ, ಡಿವೈಎಸ್ಪಿ ಪ್ರಕಾಶ್ ರಾಥೋಡ್, ಸರ್ಕಲ್ ಇನ್ಸ್ಪೆಕ್ಟರ್ ಚಿದಾನಂದ್, ಹಳೇನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸುನಿಲ್ ತೇಲಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ದಾವಣಗೆರೆಯಿಂದ ಆಗಮಿಸಿದ ವಿಶೇಷ ತಂಡಗಳು ಸ್ಥಳ ಪರಿಶೀಲನೆ ನಡೆಸಿವೆ.
ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃದ್ಧ ದಂಪತಿಯ ಸಾವಿನ ಕಾರಣ ಹಾಗೂ ಚಿನ್ನಾಭರಣ ನಾಪತ್ತೆಯ ಹಿಂದಿನ ರಹಸ್ಯ ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
