POSTMANNEWS

ನೈಜ ಸುದ್ದಿ ನೇರ ಬಿತ್ತರ..

400 ಕೋಟಿ ರೂ. ಕ್ಯಾಶ್ ದರೋಡೆ ತಡವಾಗಿ ಬೆಳಕಿಗೆ – ಆ ಘಾಟ್‌ನಲ್ಲಿ ಏನಾಯಿತು? | Biggest Cash Robbery

ಘಾಟ್‌ನಲ್ಲಿ ನಡೆದಿರುವ 400 ಕೋಟಿ ರೂ. ನಗದು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ–ಗೋವಾ–ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆದ ಈ ಭಾರೀ ಅಪರಾಧಕ್ಕೆ ಸಂಬಂಧಿಸಿದಂತೆ SIT ರಚನೆಗೊಂಡಿದ್ದು, ಮೂರು ರಾಜ್ಯಗಳ ಪೊಲೀಸರು ಸಂಯುಕ್ತ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಐವರು ಬಂಧನವಾಗಿದ್ದು, ಇನ್ನಷ್ಟು ದೊಡ್ಡ ಹೆಸರುಗಳು ಬಹಿರಂಗವಾಗುವ ಸಾಧ್ಯತೆ ಇದೆ.

ಕರ್ನಾಟಕ–ಗೋವಾ–ಮಹಾರಾಷ್ಟ್ರ ಗಡಿಭಾಗದ ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದಿರುವ ಸುಮಾರು 400 ಕೋಟಿ ರೂ. ಮೌಲ್ಯದ ಭಾರೀ ನಗದು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ರಾಜ್ಯಾದ್ಯಂತ ಭಾರೀ ಚರ್ಚೆ ಮತ್ತು ಸಂಚಲನಕ್ಕೆ ಕಾರಣವಾಗಿದೆ.

ಗೋವಾದಿಂದ ಕರ್ನಾಟಕ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಎರಡು ಕಂಟೇನರ್‌ಗಳನ್ನು ಅಪಹರಿಸಿ, ಅದರಲ್ಲಿದ್ದ ಅಪಾರ ಪ್ರಮಾಣದ ನಗದನ್ನು ದರೋಡೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಕರ್ನಾಟಕ ಪೊಲೀಸರಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನವರಿ 6ರಂದು ಬೆಳಗಾವಿ ಪೊಲೀಸರಿಗೆ ಪತ್ರ ಬರೆದಿದ್ದು, ಈ ಪತ್ರದ ಮೂಲಕವೇ ಈ ಭಾರೀ ಪ್ರಕರಣ ಬಹಿರಂಗವಾಗಿದೆ. ಪೊಲೀಸ್ ದಾಖಲೆಗಳ ಪ್ರಕಾರ, ಈ ದರೋಡೆ ಘಟನೆ 2025ರ ಅಕ್ಟೋಬರ್ 16ರಂದು ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಜಾರಾಮನ್ ಸ್ಪಷ್ಟಪಡಿಸಿದ್ದಾರೆ.

ಅಪಹರಣ ಪ್ರಕರಣದಿಂದ ದರೋಡೆ ಬಯಲು

ಈ ದರೋಡೆ ಪ್ರಕರಣದ ಬೆನ್ನಲ್ಲೇ, ಅಕ್ಟೋಬರ್ 22ರಂದು ನಾಸಿಕ್‌ನಲ್ಲಿ ಸಂದೀಪ್ ಪಾಟೀಲ್ ಎಂಬ ಯುವಕನ ಅಪಹರಣ ನಡೆದಿರುವುದು ಬೆಳಕಿಗೆ ಬಂದಿದೆ. ಅಪಹರಣದ ವೇಳೆ ಆತನ ಮೇಲೆ ಕ್ರೂರ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಪಾಟೀಲ್ ನೀಡಿದ ದೂರಿನ ಆಧಾರದಲ್ಲೇ 400 ಕೋಟಿ ರೂ. ದರೋಡೆ ಪ್ರಕರಣದ ಕೊಂಡಿ ಪತ್ತೆಯಾಗಿದೆ. ಈ ಹಣವು ಮುಂಬೈ–ಥಾಣೆ ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಮೂರು ರಾಜ್ಯಗಳ ಸಂಯುಕ್ತ ತನಿಖೆ, SIT ರಚನೆ

ಘಟನೆಯ ಗಂಭೀರತೆಯನ್ನು ಮನಗಂಡು ಬೆಳಗಾವಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಖಾನಾಪುರ ಉಪನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡವನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಜೊತೆಗೆ, ಪ್ರಕರಣದ ಆಳವಾದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ.

ಚೋರ್ಲಾ ಘಾಟ್ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿರುವುದರಿಂದ, ಮೂರು ರಾಜ್ಯಗಳ ಪೊಲೀಸರ ನಡುವೆ ಸಮನ್ವಯದೊಂದಿಗೆ ತನಿಖೆ ನಡೆಯುತ್ತಿದೆ. ಅಪರಾಧ ನಿಯಂತ್ರಣಕ್ಕಾಗಿ ಚೋರ್ಲಾ ಘಾಟ್ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಐವರು ಬಂಧನ, ಇನ್ನೂ ಆರೋಪಿಗಳು ಪರಾರಿ

ಈ ಪ್ರಕರಣಕ್ಕೆ ಸಂಬಂಧಿಸಿ ನಾಸಿಕ್ ಗ್ರಾಮೀಣ ಪೊಲೀಸರು ಈಗಾಗಲೇ ಐದು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಜಯೇಶ್ ಕದಮ್, ವಿಶಾಲ್ ನಾಯ್ಡು, ಸುನಿಲ್ ಧುಮಾಲ್, ವಿರಾಟ್ ಗಾಂಧಿ ಮತ್ತು ಜನಾರ್ದನ್ ಧಾಯಗುಡೆ (ಮುಂಬೈ) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ವಿರಾಟ್ ಗಾಂಧಿ ಬಂಧನವಾಗಿದ್ದು, ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಳೆಯ 2,000 ರೂ. ನೋಟುಗಳ ಶಂಕೆ

ಪೊಲೀಸ್ ತನಿಖೆಯ ಪ್ರಕಾರ, ಗೋವಾದಿಂದ ಕರ್ನಾಟಕದ ದೇವಸ್ಥಾನಕ್ಕೆ ಸಾಗಿಸಲಾಗುತ್ತಿದ್ದ ಕಂಟೇನರ್‌ನಲ್ಲಿ ಹಳೆಯ 2,000 ರೂ. ನೋಟುಗಳಿಂದ ತುಂಬಿದ ಸುಮಾರು 400 ಕೋಟಿ ರೂ. ನಗದು ಇತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಣಕ್ಕೆ ಸಂಬಂಧಿಸಿ ನಕಲಿ ಖಾತೆಗಳ ಸೃಷ್ಟಿ ಮತ್ತು ದುರುಪಯೋಗ ಆರೋಪಗಳೂ ಕೇಳಿಬಂದಿವೆ. ಈ ಘಟನೆ ಸುಮಾರು ಒಂದೂವರೆ ರಿಂದ ಎರಡು ತಿಂಗಳ ಹಿಂದೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಗೃಹ ಸಚಿವರ ಪ್ರತಿಕ್ರಿಯೆ

ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, “ಮಹಾರಾಷ್ಟ್ರ ಪೊಲೀಸರು ನಮ್ಮ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಕೇಳಲಾಗಿದೆ. ಸಂಪೂರ್ಣ ವಿವರ ಬಂದ ಬಳಿಕ ಕರ್ನಾಟಕ ಪೊಲೀಸರ ಪಾತ್ರವನ್ನು ಪರಿಶೀಲಿಸಲಾಗುತ್ತದೆ. ಮುಂದಿನ ತನಿಖೆಗೆ ಮಹಾರಾಷ್ಟ್ರ ಪೊಲೀಸರು ನಮ್ಮ ಸಹಕಾರ ಕೇಳಿದ್ದಾರೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ದೊಡ್ಡ ಹೆಸರುಗಳು ಬಹಿರಂಗವಾಗುವ ಸಾಧ್ಯತೆ
ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಈ ದರೋಡೆ ಪ್ರಕರಣದಲ್ಲಿ ದೊಡ್ಡ ರಾಜಕೀಯ ಹಾಗೂ ಆರ್ಥಿಕ ಸಂಪರ್ಕಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ಬಂಧಿತರ ವಿಚಾರಣೆಯಿಂದ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರುವ ನಿರೀಕ್ಷೆಯಿದ್ದು, ಈ ಭಾರೀ ನಗದು ದರೋಡೆ ಪ್ರಕರಣ ಮೂರು ರಾಜ್ಯಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

About The Author

Exit mobile version