Hosanagar Block Congress President B.G. Chandramouli criticizes BJP, stating the party has no moral authority to protest against the Congress government and defends police action and development works in the constituency.
ಕಾಂಗ್ರೆಸ್ ವಿರುದ್ದ ಪ್ರತಿಭಟನೆ ಹೆಸರಿನಲ್ಲಿ ಬಿಜೆಪಿ ರಾಜಕೀಯ ನಾಟಕವಾಡುತ್ತಿದೆ | ಪ್ರತಿಭಟನೆಯ ಕಾರಣವೇ ಹಾಸ್ಯಾಸ್ಪದ – ಬಿ ಜಿ ಚಂದ್ರಮೌಳಿ
ಹೊಸನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕರ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಹೇಳಿದರು.
ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸನಗರ ಬಿಜೆಪಿ ಮಂಡಲವು ನಾಳೆ ಅಜೆಂಡಾವೊಂದಿಗೇ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದು, ಅದಕ್ಕೆ ನೀಡಿರುವ ಕಾರಣಗಳು ಅತ್ಯಂತ ಹಾಸ್ಯಾಸ್ಪದವಾಗಿವೆ ಎಂದು ಟೀಕಿಸಿದರು. ಪೊಲೀಸ್ ಇಲಾಖೆ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.
ಒಬ್ಬ ವ್ಯಕ್ತಿಯ ಮೇಲೆ ನಾಲೈದು ಮಂದಿ ಪೊಲೀಸ್ ಸಿಬ್ಬಂದಿಗಳ ಎದುರಲ್ಲೇ ಮಾರಣಾಂತಿಕ ಹಲ್ಲೆ ನಡೆದಿದ್ದು, ಅದರ ವಿಡಿಯೋ ದೃಶ್ಯಾವಳಿಗಳೂ ಲಭ್ಯವಿವೆ. ಇಂತಹ ಘಟನೆಗೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದೇ ಪೊಲೀಸ್ ಇಲಾಖೆಯ ಕರ್ತವ್ಯ. ಹಲ್ಲೆ ಮಾಡಿದವರು ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ – ಯಾವ ಪಕ್ಷದವರಾಗಿದ್ದರೂ ಕೂಡ ಇದೇ ಕ್ರಮ ಕೈಗೊಳ್ಳಲಾಗುತ್ತಿತ್ತು.ಇದರಲ್ಲಿ ಶಾಸಕರ ಹಸ್ತಕ್ಷೇಪವಿದೆ ಎಂಬ ಆರೋಪ ಅಸಂಬದ್ಧ ಎಂದು ಸ್ಪಷ್ಟಪಡಿಸಿದರು.
ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಸತ್ಯಕ್ಕೆ ದೂರವಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಹೆಚ್ಚು ಪಡೆದಿರುವುದು ಬಿಜೆಪಿಗರೇ ಆಗಿದ್ದಾರೆ ಎಂದು ಹೇಳಿದರು.
ಮೆಸ್ಕಾಂ ಇಲಾಖೆಯ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಹೇಳುತ್ತಿರುವ ಮಾಜಿ ಶಾಸಕರಿಗೆ ಪ್ರತಿಕ್ರಿಯಿಸಿದ ಚಂದ್ರಮೌಳಿ, ತಮ್ಮ ಅಧಿಕಾರಾವಧಿಯೊಂದಿಗೆ ಹೋಲಿಸಿದರೆ ಇಂದಿನ ಶಾಸಕರು ಅಧಿಕಾರ ಸ್ವೀಕರಿಸಿದ ಬಳಿಕ ಶೇ.90ರಷ್ಟು ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ನಡೆದ ಗಲಭೆಗೆ ಬಿಜೆಪಿಯೇ ಮುಖ್ಯ ಕಾರಣ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಕಿಡಿಕಾರಿದರು.ಬಾಂಗ್ಲಾ ವಲಸಿಗರ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಕೇಂದ್ರ ಗುಪ್ತಚರ ಇಲಾಖೆ ಯಾರ ನಿಯಂತ್ರಣದಲ್ಲಿ ಇದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ. ಕೇಂದ್ರ ಸರ್ಕಾರದ ವೈಫಲ್ಯದಿಂದಲೇ ವಲಸಿಗರು ದೇಶ ಹಾಗೂ ರಾಜ್ಯದೊಳಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗರಿಗೆ ಪ್ರತಿಭಟಿಸಲು ಕೇಂದ್ರ ಸರ್ಕಾರದ ಅನೇಕ ವೈಫಲ್ಯಗಳಿವೆ. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಜಾರಿಗೆ ತಂದ ಜನಪರ ಯೋಜನೆಗಳನ್ನು ತಿದ್ದುಪಡಿ ಮಾಡುವ ಮೂಲಕ ಬಡವರು, ಹಿಂದುಳಿದ ವರ್ಗಗಳು ಹಾಗೂ ಕಾರ್ಮಿಕರ ಹಿತಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಮೊದಲು ಈ ವರ್ಗಗಳ ಪರವಾಗಿದ್ದೇವೆ ಎಂಬುದನ್ನು ಸಾಬೀತುಪಡಿಸಿ ಬಳಿಕ ಪ್ರತಿಭಟನೆ ನಡೆಸಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಹೂವಿನಕೋಣೆ ಮುಖಂಡ ಪ್ರಭಾಕರ್, ಎಂಪಿ ಸುರೇಶ್, ಚನ್ನಬಸಪ್ಪ, ಲೋಕೇಶ್, ಚಂದ್ರಶೇಖರ್, ಅಣ್ಣಪ್ಪ, ಶೇಖರಪ್ಪ, ಮಂಜುನಾಥ್, ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ, ಗುರು ಜಯನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
