A farmer was seriously injured in a bear attack in Haregoppa village of Shikaripur taluk, Shivamogga district. Forest officials visited the hospital and assured compensation and safety measures.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಾರೆಗೊಪ್ಪ ಗ್ರಾಮದಲ್ಲಿ ಗುರುವಾರ ಮುಂಜಾನೆ ಕರಡಿ ದಾಳಿಗೆ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗ್ರಾಮದ ಸೋಮ್ಲಾ ನಾಯಕ್ ಅವರು ತಮ್ಮ ಜಮೀನಿನಲ್ಲಿ ಬೆಳಿಗ್ಗೆ ಮೋಟರ್ ಆನ್ ಮಾಡಲು ತೆರಳಿದ್ದ ವೇಳೆ, ಹಿಂದಿನಿಂದ ಬಂದ ಕರಡಿ ಏಕಾಏಕಿ ದಾಳಿ ನಡೆಸಿದೆ. ದಾಳಿಯಲ್ಲಿ ಅವರ ಕುತ್ತಿಗೆ, ಬೆನ್ನು ಹಾಗೂ ಹೊಟ್ಟೆಯ ಭಾಗದಲ್ಲಿ ತೀವ್ರ ಗಾಯಗಳಾಗಿವೆ. ಸೋಮ್ಲಾ ನಾಯಕ್ ಅವರ ಕಿರುಚಾಟಕ್ಕೆ ಬೆದರಿದ ಕರಡಿ ಸ್ಥಳದಿಂದ ಪರಾರಿಯಾಗಿದೆ.
ಗಂಭೀರವಾಗಿ ಗಾಯಗೊಂಡ ಸೋಮ್ಲಾ ನಾಯಕ್ ಪ್ರಾಣಾಪಾಯದಿಂದ ಸ್ಥಳದಿಂದ ತಪ್ಪಿಸಿಕೊಂಡು ಹಾರೆಗೊಪ್ಪ ಬಸ್ ನಿಲ್ದಾಣಕ್ಕೆ ಬಂದಿದ್ದು, ಸ್ಥಳೀಯ ಸಾರ್ವಜನಿಕರು ತಕ್ಷಣ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಅರಣ್ಯ ಇಲಾಖೆಯ ಫಾರೆಸ್ಟ್ ಅಧಿಕಾರಿ ಡಿಆರ್ಎಫ್ಒ ಹರೀಶ್ ಸಜ್ಜಪ್ಪ ಅವರು ಗಾಯಾಳುವಿನ ಆರೋಗ್ಯ ವಿಚಾರಿಸಿ ಮಾಹಿತಿ ಸಂಗ್ರಹಿಸಿದರು. ಅರಣ್ಯ ಇಲಾಖೆಯಿಂದ ದೊರೆಯುವ ಪರಿಹಾರವನ್ನು ಒದಗಿಸುವ ಭರವಸೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮತ್ತೆ ಕರಡಿ ಕಾಣಿಸಿಕೊಂಡರೆ ಅದನ್ನು ಸೆರೆ ಹಿಡಿಯಲು ಬೋನ್ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
