Robbers attack areca nut trader, steal 44 quintals of areca nuts from vehicle
ಅಡಿಕೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ವಾಹನದಿಂದ 44 ಕ್ವಿಂಟಾಲ್ ಅಡಿಕೆ ದೋಚಿದ ದರೋಡೆಕೋರರು
Robbers attack areca nut trader, steal 44 quintals of areca nuts from vehicle
ಅಡಿಕೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ ವಾಹನದಿಂದ 44 ಕ್ವಿಂಟಾಲ್ ಅಡಿಕೆ ದೋಚಿದ ದರೋಡೆಕೋರರು
Robbers attack areca nut trader, steal 44 quintals of areca nuts from vehicle
ನರಸಿಂಹರಾಜಪುರ – ಅಡಿಕೆ ದರ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಅಡಿಕೆ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ಭಾಗವಾಗಿ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಸಮೀಪ ಭಾರೀ ದರೋಡೆ ಘಟನೆ ನಡೆದಿದೆ. ದುಷ್ಕರ್ಮಿಗಳ ತಂಡವೊಂದು ಅಡಿಕೆ ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿ, ಸುಮಾರು 44 ಕ್ವಿಂಟಾಲ್ ಹಸಿ ಅಡಿಕೆ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಬಾಳೆಹೊನ್ನೂರು–ನರಸಿಂಹರಾಜಪುರ ರಸ್ತೆಯ ಅಳೇಹಳ್ಳಿ ಗ್ರಾಮದ ಬಳಿ ನಡುರಾತ್ರಿ ಈ ದರೋಡೆ ನಡೆದಿದೆ. ಕಳಸ ತಾಲ್ಲೂಕಿನ ಹೆಮ್ಮಕ್ಕಿ ಗ್ರಾಮದ ನಿವಾಸಿ ಕೆ. ರವಿ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ವಿವರ:
ಕೆ. ರವಿ ಅವರು ಕಾರ್‌ಗದ್ದೆ ಗ್ರಾಮದ ವ್ಯಕ್ತಿಯೊಬ್ಬರಿಂದ 67 ಚೀಲ ಹಸಿ ಅಡಿಕೆಯನ್ನು ಖರೀದಿಸಿ, ಚಾಲಕನೊಂದಿಗೆ ಪಿಕಪ್ ವಾಹನದಲ್ಲಿ ಭದ್ರಾವತಿ ಕಡೆ ತೆರಳುತ್ತಿದ್ದರು. ಈ ವೇಳೆ ಬಾಳೆಹೊನ್ನೂರಿನಿಂದಲೇ ಹಿಂಬಾಲಿಸಿಕೊಂಡು ಬಂದ ದರೋಡೆಕೋರರ ತಂಡ ಅಳೇಹಳ್ಳಿ ಬಳಿ ವಾಹನವನ್ನು ಅಡ್ಡಗಟ್ಟಿದೆ.
ಪಿಕಪ್ ಹಾಗೂ ಬೈಕ್‌ನಲ್ಲಿ ಬಂದ ಐದಾರು ಮಂದಿ ದುಷ್ಕರ್ಮಿಗಳು ಕಬ್ಬಿಣದ ಸಲಾಕೆ ಮತ್ತು ಕತ್ತಿಗಳನ್ನು ಬಳಸಿ ದಾಳಿ ನಡೆಸಿ, ವಾಹನದ ಗಾಜು ಒಡೆದು ಒಳನುಗ್ಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ರವಿ ಅವರ ಮೇಲೆ ಹಲ್ಲೆ ನಡೆಸಿ, ಜೇಬಿನಲ್ಲಿದ್ದ 29 ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ನಂತರ ರವಿ ಹಾಗೂ ಚಾಲಕ ವಿಶ್ವಾಸ್ ಅವರ ಕೈಗಳನ್ನು ಕಟ್ಟಿ ಬೆದರಿಸಿ, ವಾಹನವನ್ನು ಕುದುರೆಗುಂಡಿಯ ಕಾಡು ದಾರಿಯೊಂದಕ್ಕೆ ಕರೆದೊಯ್ದ ದರೋಡೆಕೋರರು, ಪಿಕಪ್‌ನಲ್ಲಿ ಇದ್ದ ಸುಮಾರು 44 ಕ್ವಿಂಟಾಲ್ ಹಸಿ ಅಡಿಕೆಯನ್ನು ತಮ್ಮ ವಾಹನಕ್ಕೆ ವರ್ಗಾಯಿಸಿಕೊಂಡಿದ್ದಾರೆ.
ಸುಮಾರು ಒಂದು ಗಂಟೆಯ ಬಳಿಕ ಸಂತ್ರಸ್ತರ ಕೈಗಳ ಬಂಧನ ಬಿಚ್ಚಿದ ದರೋಡೆಕೋರರು, 200 ಮೀಟರ್ ದೂರದಲ್ಲಿ ಪಿಕಪ್ ವಾಹನ ಬಿಟ್ಟಿರುವುದಾಗಿ ಹೇಳಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



