
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಖೈದಿ ಗರ್ತಿಕೆರೆಯ ಕೃಷ್ಣ ಸಾವು
ಶಿವಮೊಗ್ಗ: Shivamogga ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಹೊಸನಗರ ತಾಲ್ಲೂಕಿನ ಗರ್ತಿಕೆರೆ–ಅಮೃತ ಗ್ರಾಮದ ನಿವಾಸಿ ಕೃಷ್ಣ (44) ಮೃತರಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ತಪ್ಪು ಸಾಬೀತಾಗಿದ್ದ ಕಾರಣ, ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೃಷ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಮಧುಮೇಹದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿಸೆಂಬರ್ 5ರಂದು ಸಂಜೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ನಡೆಯುತ್ತಿದ್ದರೂ, ಸ್ಥಿತಿ ಗಂಭೀರವಾಗುತ್ತಿದ್ದ ಕೃಷ್ಣರು ಇಂದು ಬೆಳಗಿನ ಜಾವ ಸುಮಾರು 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮತ್ತು ಜೈಲು ಆಡಳಿತ ದೃಢಪಡಿಸಿದೆ.
ದಿನಾಂಕ 22/12/2021 ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಗರ್ತಿಕೆರೆ ವಾಸಿ ಸತೀಶ ಶೆಟ್ಟಿ, ಎಂಬುವವನು ತನ್ನ ಸ್ನೇಹಿತರಾದ ಫಯಾಜ್ @ ಕೋಳಿ ಫಯಾಜ್ ಮತ್ತು ಕೃಷ್ಣ ರವರೊಂದಿಗೆ ಇದ್ದಾಗ ಸತೀಶ ಶೆಟ್ಟಿಯು ಕೂಲಿ ಕೆಲಸದ ಹಣ ಕೇಳಿದನೆಂಬ ವಿಚಾರದಲ್ಲಿ ಫಯಾಜ್ @ ಕೋಳಿ ಫಯಾಜ್ ಮತ್ತು ಕೃಷ್ಣ ಸೇರಿಕೊಂಡು ಅಮೃತ ಗ್ರಾಮದ ಕೆಳಗಿನ ಕೆರೆ ದಂಡೆಯ ಮೇಲೆ ಕರೆದುಕೊಂಡು ಹೋಗಿ ಕಟ್ಟಿ ಮತ್ತು ಚಾಕುವಿನಿಂದ ಮೃತನ ಕುತ್ತಿಗೆ, ಎಡಕೆನ್ನೆ, ಎಡಕಿವಿಯ ಕೆಳಭಾಗಕ್ಕೆ ಕೊಯ್ದು ಕೊಲೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವವನ್ನು ಕೆರೆಯ ನೀರಿನಲ್ಲಿ ಹಾಕಿದ್ದು ಈ ಬಗ್ಗೆ ದಿನಾಂಕ;23/12/2021 ರಂದು ಸತೀಶಶೆಟ್ಟಿರವರ ಭಾವ ರಾಜುಶೆಟ್ಟಿ ರವರು ನೀಡಿದ ದೂರಿನ ಮೇರೆಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 143/2021 ಕಲಂ302 , 34 IPC ಐಪಿಸಿ ಪ್ರಕರಣದಾಖಲಾಗಿತ್ತು.
ಘಟನೆಯ ಹಿನ್ನಲೆ ;
ಗರ್ತಿಕೆರೆ ಗ್ರಾಮದ ಅವುಕ ರಸ್ತೆಯ ನಿವಾಸಿ ಸತೀಶ್ ಶೆಟ್ಟಿ, ಗರ್ತಿಕೆರೆಯ ಕೋಳಿ ಪಯಾಜ್,ಗರ್ತಿಕೆರೆಯ ಕೃಷ್ಣ ಎಂಬ ಸ್ನೇಹಿತರುಗಳು ಸೇರಿ ಬುಧವಾರ ತಡರಾತ್ರಿ ಸತೀಶ್ ಶೆಟ್ಟಿಯ ಮನೆಯಲ್ಲಿ ಮದ್ಯ ಸೇವಿಸಿ ಪಾರ್ಟಿ ನಡೆಸಿದ ನಂತರ ಮೂವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂದಿಸಿದಂತೆ ಜಗಳವಾಗಿ ಕೋಳಿ ಪಯಾಜ್ ಹಾಗೂ ಕೃಷ್ಣ ಸೇರಿ ಮಾರಕಾಸ್ತ್ರಗಳಿಂದ ಸತೀಶ್ ಶೆಟ್ಟಿ (53)ಯನ್ನು ಕೊಲೆ ಮಾಡಿ ಗರ್ತಿಕೆರೆ ಮೂಲ ಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪದಲ್ಲಿರುವ ಕೆರೆಗೆ ಶವನ್ನು ಬಿಸಾಡಿ ಹೋಗಿದ್ದರು.ವಿಷಯ ತಿಳಿದ ಗ್ರಾಮಸ್ಥರು ಆರೋಪಿ ಕೋಳಿ ಪಯಾಜ್ ಹಾಗೂ ಕೃಷ್ಣ ಎಂಬಾತನನ್ನು ಪೊಲೀಸರಿಗೆ ಒಪ್ಪಿಸಿದ್ದರು.



