January 11, 2026

ಸಮಟಗಾರು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಸಮಟಗಾರು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

“ಗೋವಿಂದ ಬಾಬು ಪೂಜಾರಿಯಂತಹ ಹೃದಯವಂತರು ಸಮಾಜದ ನಿಜವಾದ ಶಕ್ತಿ” — ಆರಗ ಜ್ಞಾನೇಂದ್ರ

ಹುಂಚ : ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮಟಗಾರಿನಲ್ಲಿ ಇಂದು ಶ್ರೀ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ (ರಿ) ಉಪ್ಪುಂದ ಅವರ ಆಶ್ರಯದಲ್ಲಿ ಸ್ಥಾಪಿಸಲಾದ ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯ ಉದ್ಘಾಟನಾ ಸಮಾರಂಭ ಭವ್ಯವಾಗಿ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರರವರು, “ಗೋವಿಂದ ಬಾಬು ಪೂಜಾರಿಯವರ ಸಾಮಾಜಿಕ ಸೇವಾ ಮನೋಭಾವ ಶ್ಲಾಘನೀಯ. ಇಂತಹ ಹೃದಯವಂತರು ಸಮಾಜದಲ್ಲಿ ಹೆಚ್ಚಬೇಕು,” ಎಂದು ಪ್ರಶಂಸಿಸಿದರು. ಅಲ್ಲದೇ, ಶಾಲಾ ಶಿಕ್ಷಕರ ಕರ್ತವ್ಯನಿಷ್ಠೆ ಮತ್ತು ಬದ್ದತೆಯನ್ನೂ ಮೆಚ್ಚಿದರು.

ದಾನಿಯ ಜೀವನದ ಹೊಳಪು ಮತ್ತು ಸಾಮಾಜಿಕ ಸೇವೆಯ ಹಾದಿಯನ್ನು ಒಳಗೊಂಡ ಅಭಿನಂದನಾ ಪತ್ರ ಎಲ್ಲರ ಮನ ಸೆಳೆಯಿತು. ಮಾತನಾಡಿದ ಗೋವಿಂದ ಬಾಬು ಪೂಜಾರಿಯವರು, ಶಾಲೆಯ ವಾತಾವರಣ ಹಾಗೂ ಸಂಘಟನೆಯ ಶ್ರೇಯೋಭಿವೃದ್ಧಿಯನ್ನು ಶ್ಲಾಘಿಸಿದರು.

ಶ್ರೀ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ (ರಿ) ನ ಗೋವಿಂದ ಬಾಬು ಪೂಜಾರಿ ರವರು ಶಾಲೆಗೆ ಮೂರು ಕಂಪ್ಯೂಟರ್‌ಗಳು, ಪ್ರೊಜೆಕ್ಟರ್, ಬ್ಯಾಟರಿ ಹಾಗೂ ಲ್ಯಾಪ್‌ಟಾಪ್‌ನಿಂದ ಕೂಡಿದ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ಉಚಿತವಾಗಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಂಗಲ ದೇವರಾಜ್, ಸದಸ್ಯ ಆಶಾಯದುಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಎಂ, ಹಿರಿಯರಾದ ಅನಂತ ರಾವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಗೌಡ, ಹಾಗೂ ಮುಖ್ಯ ಶಿಕ್ಷಕಿ ರತ್ನಕುಮಾರಿ ಎಸ್. ಮೇಡಂ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ ವತಿಯಿಂದ “ಯಕ್ಷಧ್ರುವ” ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ಇದರ ಸಂಚಾಲಕ ರಾಘವೇಂದ್ರ (ಬ್ರಹ್ಮ ಪತ್ರಿಕೆ ಸಂಪಾದಕರು), ತರಬೇತುದಾರರಾದ ನಾರಾಯಣ, ಹಾಗೂ ಗೌತಮ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಅಂಬಿಕಾ ನಿರೂಪಿಸಿದರು ಮತ್ತು ಶಿಕ್ಷಕ ದಿನೇಶ್ ನಾಯ್ಕ ವಂದಿಸಿದರು.

About The Author

Exit mobile version