ರಿಪ್ಪನ್‌ಪೇಟೆಯ ಎಂ.ಎಂ. ಪರಮೇಶ್ ಅವರಿಗೆ ರಾಜ್ಯ ಮಟ್ಟದ “ಸಹಕಾರಿ ರತ್ನ” ಪ್ರಶಸ್ತಿ ಗೌರವ
ರಿಪ್ಪನ್‌ಪೇಟೆ : ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ನೀಡಲಾಗುವ ರಾಜ್ಯ ಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿಗೆ ಈ ಬಾರಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ ಆಯ್ಕೆಯಾಗಿದ್ದಾರೆ.
ನವೆಂಬರ್ 14 ರಂದು ಬೆಂಗಳೂರು ಪ್ಯಾಲೇಸ್ ಗ್ರೌಂಡ್‌ನ ಗಾಯತ್ರಿ ವಿಹಾರ್ನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.
ಎಂ.ಎಂ. ಪರಮೇಶ್ ಅವರು ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸತತ 9ನೇ ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ನಾಲ್ಕು ಬಾರಿ ಶಿವಮೊಗ್ಗ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್‌ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಮತ್ತು ಪ್ರಾಮಾಣಿಕ ಸೇವೆ
ಶಿವಮೊಗ್ಗ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಪಕ್ಷಾತೀತ ಹಾಗೂ ಧರ್ಮಾತೀತ ಸೇವೆಯ ಮಾದರಿಯಾಗಿ ಖ್ಯಾತಿ ಪಡೆದಿರುವ ಎಂ.ಎಂ. ಪರಮೇಶ್ ಅವರು 37 ವರ್ಷಗಳಿಗೂ ಹೆಚ್ಚು ಕಾಲದಿಂದ ಸಹಕಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಸಮಾನತೆ, ಸಹಬಾಳ್ವೆ, ಸಹಕಾರ ಮತ್ತು ಸಮರಸತೆಯ ಮೌಲ್ಯಗಳನ್ನು ಜೀವನದ ಅಂಶವನ್ನಾಗಿಸಿಕೊಂಡು ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸೇವೆ ಹೊಸನಗರ ತಾಲೂಕಿಗೆ ಮಾತ್ರ ಸೀಮಿತವಾಗದೇ, ಜಿಲ್ಲಾ ಮಟ್ಟದ ಸಹಕಾರ ಚಟುವಟಿಕೆಗಳಿಗೂ ವಿಸ್ತರಿಸಿದೆ.
ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 27 ವರ್ಷಗಳಿಂದ ಸತತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪರಮೇಶ್ ಅವರ ಆಡಳಿತ ಶೈಲಿ, ನಿಷ್ಠೆ ಮತ್ತು ದೃಷ್ಟಿಕೋನವು ಸಹಕಾರಿ ಚಳವಳಿಗೆ ಮಾದರಿಯಾಗಿದೆ.
ಅಭಿನಂದನೆಗಳು
ರಾಜ್ಯ ಮಟ್ಟದ ‘ಸಹಕಾರಿ ರತ್ನ’ ಪ್ರಶಸ್ತಿ ಪಡೆದ ಎಂ.ಎಂ. ಪರಮೇಶ್ ಅವರಿಗೆ ಸಾಗರ–ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಹಂಜಾ,ವಾಟಗೋಡು ಸುರೇಶ್ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಕೆಡಿಪಿ ಸದಸ್ಯ ಆಸೀಫ್ ಭಾಷಾ, ಗ್ರಾಮ ಪಂಚಾಯತ್ ಸದಸ್ಯ ನಿರೂಪ್ ಕುಮಾರ್ ಹಾಗೂ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ.




