Headlines

ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು

ರಿಪ್ಪನ್ ಪೇಟೆ : ಪೋಸ್ಟ್ ಮ್ಯಾನ್ ನ್ಯೂಸ್  ಕಚೇರಿ ಉದ್ಘಾಟನೆ

ವರದಿಗಾರಿಕೆಯಲ್ಲಿ ನೇರವಂತಿಕೆ – ಮಾಧ್ಯಮಗಳ ನಿಜಶಕ್ತಿ – ಗೋಪಾಲಕೃಷ್ಣ ಬೇಳೂರು

ರಿಪ್ಪನ್ ಪೇಟೆ: “ಮಾಧ್ಯಮವು ಕೇವಲ ಸುದ್ದಿಯನ್ನು ಪ್ರಸಾರ ಮಾಡುವ ಯಂತ್ರವಲ್ಲ, ಅದು ಸಂವಿಧಾನದ ನಾಲ್ಕನೆಯ ಅಂಗವಾಗಿ ಸಾರ್ವಜನಿಕರ ಧ್ವನಿ ಮತ್ತು ಪ್ರಜಾಪ್ರಭುತ್ವದ ಶಕ್ತಿ. ವರದಿಗಾರಿಕೆಯಲ್ಲಿ ನೇರವಂತಿಕೆ, ನೈಜತೆ ಹಾಗೂ ಪತ್ರಕರ್ತರ ನಿಷ್ಠೆ ಉಳಿಯುವ ಮಟ್ಟಕ್ಕೆ ಸಮಾಜದಲ್ಲಿಯೂ ವಿಶ್ವಾಸ ಮತ್ತು ಗೌರವ ಉಳಿಯುತ್ತದೆ” ಎಂದು ಶಾಸಕ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.

ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ನೂತನವಾಗಿ ಉದ್ಘಾಟಿಸಲ್ಪಟ್ಟ ‘ಪೋಸ್ಟ್ ಮ್ಯಾನ್ ನ್ಯೂಸ್’ ಕಚೇರಿಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಕೆಲ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳ ಅಬ್ಬರದಿಂದಾಗಿ ಮಾಹಿತಿ ಪ್ರಸರಣದ ವೇಗ ಹೆಚ್ಚಾದರೂ, ನೈಜ ಸುದ್ದಿಯ ಸ್ವರೂಪದಲ್ಲಿ ಹಿನ್ನಡೆ ಉಂಟಾಗಿದೆ ಎಂದು ವಿಷಾದಿಸಿದರು. “ಮಾಹಿತಿಯನ್ನು ಮೊದಲಿಗರಾಗಿ ನೀಡುವ ಸ್ಪರ್ಧೆಯಲ್ಲಿ ಹಲವರು ದೃಢೀಕರಣ, ವಾಸ್ತವ ಪರಿಶೀಲನೆ ಮತ್ತು ನೈತಿಕ ಮೌಲ್ಯಗಳನ್ನು ಕಡೆಗಣಿಸುತ್ತಿರುವುದು ಚಿಂತಾಜನಕ. ಓದುಗರು ಇಂದು ನೈಜ ಮತ್ತು ವಾಸ್ತವಾಧಾರಿತ ಸುದ್ದಿಯನ್ನು ಹುಡುಕುತ್ತಿದ್ದಾರೆ. ನಂಬಿಕೆಗೆ ತಕ್ಕ ಮಾಹಿತಿಯನ್ನು ನೀಡುವುದು ಮಾಧ್ಯಮಗಳ ಮೂಲ ಕರ್ತವ್ಯ” ಎಂದರು.

ಅವರು ಮುಂದುವರೆದು, ‘ಪೋಸ್ಟ್ ಮ್ಯಾನ್ ನ್ಯೂಸ್’ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಮಲೆನಾಡಿನ ಜನರ ನಾಡಿ ಸ್ಪರ್ಶಿಸುವಂತೆ ನೈಜ ಸುದ್ದಿಯನ್ನು ನಿರಂತರವಾಗಿ ಪ್ರಕಟಿಸುತ್ತಾ ಸ್ಥಳೀಯ ಮಟ್ಟದಲ್ಲಿ ವಿಶ್ವಾಸಾರ್ಹತೆ ಗಳಿಸಿರುವುದು ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದರು. “ರಫ಼ಿ ರಿಪ್ಪನ್ ಪೇಟೆ ನೇತ್ರತ್ವದ ಪೋಸ್ಟ್ ಮ್ಯಾನ್ ನ್ಯೂಸ್ ತಂಡ  ಸುದ್ದಿಗಳನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ, ನೈಜತೆಯನ್ನು ಕಾಪಾಡುವ ರೀತಿಯಲ್ಲಿ ಪ್ರಕಟಿಸುತ್ತಿರುವುದು ವೃತ್ತಿಪರತೆಗೆ ಮಾದರಿ. ಇಂತಹ ನಿಷ್ಠೆಯೇ ಮಾಧ್ಯಮದ ಗಟ್ಟಿತನ” ಎಂದು ಬೇಳೂರು ಪ್ರಶಂಸೆ ಸಲ್ಲಿಸಿದರು.

“ಮಾಧ್ಯಮಗಳು ಸಮಾಜಕ್ಕೆ ದಿಕ್ಕು ತೋರಿಸಬೇಕು. ಜನಪ್ರತಿನಿಧಿಗಳ ಕೆಲಸಗಳಾಗಲಿ, ಸರ್ಕಾರಿ ಯೋಜನೆಗಳ ಅನುಷ್ಠಾನವಾಗಲಿ, ಸಾರ್ವಜನಿಕರ ವ್ಯಥೆಗಳಾಗಲಿ… ಎಲ್ಲವನ್ನೂ ನಿಷ್ಪಕ್ಷಪಾತವಾಗಿ ಮಂಡಿಸುವ ಶಕ್ತಿಯೇ ಪತ್ರಕರ್ತಿಕೆಗೆ ಗೌರವ ತರುತ್ತದೆ. ಮಾಹಿತಿ ಯುಗದಲ್ಲಿ ನೈಜ ಮತ್ತು ವಾಸ್ತವಾಧಾರಿತ ಸುದ್ದಿಯ ಅಗತ್ಯ ಹೆಚ್ಚಿದೆ. ಜನರ ಸಮಸ್ಯೆಗಳನ್ನು ಧ್ವನಿಕರಿಸುವ ವೇದಿಕೆಗಳನ್ನು ಸಮಾಜ ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದರು.

“ಇಂದಿನ ಓದುಗರು ಜಾಗೃತರು, ಚರ್ಚಿಸಬಲ್ಲರು, ವಿಶ್ಲೇಷಿಸಬಲ್ಲರು. ಸುಳ್ಳು ಸುದ್ದಿ ಮತ್ತು ಅತಿರೇಕದ ವರದಿ ಮಾಡಿದರೆ ಕ್ಷಣದಲ್ಲಿ ಪತ್ತೆಹಚ್ಚುತ್ತಾರೆ. ಆದ್ದರಿಂದ ನೈಜತೆ ಮತ್ತು ನೇರವಂತಿಕೆಯೇ ಮಾಧ್ಯಮಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶ.”
ಬೇಳೂರು ಗೋಪಾಲಕೃಷ್ಣ

ಉದ್ಘಾಟನಾ ಕಾರ್ಯಕ್ರಮದಲ್ಲಿ ಬಗರುಹುಕುಂ ಸಮಿತಿ ಅಧ್ಯಕ್ಷೆ ಸಾಕಮ್ಮ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಸದಸ್ಯರಾದ ಆಸಿಫ್ ಭಾಷಾ, ನಿರೂಪ್ ಕುಮಾರ್, ಮಧುಸೂದನ್,ರಮೇಶ್ ಪಿ, ಪ್ರಕಾಶ್ ಪಾಲೇಕರ್,ಪತ್ರಕರ್ತರಾದ ಪರಶುರಾಮ್ ಕೆರೆಹಳ್ಳಿ , ಚಿದಾನಂದ್ ಸ್ವಾಮಿ , ನಾಗೇಶ್ ನಾಯ್ಕ್ , ತ ಮ ನರಸಿಂಹ ,ಗ್ಯಾರಂಟಿ ಸಮಿತಿ ಸದಸ್ಯ ರವೀಂದ್ರ ಕೆರೆಹಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ , ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು,ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ ಬಿ ಲಕ್ಷ್ಮಣಗೌಡ , ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಜಿ ಆರ್ ಗೋಪಾಲಕೃಷ್ಣ , ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಎ ಚಾಬುಸಾಬ್,ಜೆಡಿಎಸ್ ತಾಲೂಕ್ ಅಧ್ಯಕ್ಷ ಎನ್ ವರ್ತೇಶ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷ ಪಿಯೂಸ್  ರೋಡ್ರಿಗಸ್, ಪ್ರಮುಖರಾದ ಸಾಧಿಕ್ ಕಚ್ಚಿಗೆಬೈಲ್  , ಶಿವಾನಂದ್ ,ಕಗ್ಗಲಿ ಲಿಂಗಪ್ಪ , ಹರೀಶ್ ಪ್ರಭು,  ಶ್ರೀಧರ್ ಚಿಗುರು , ಸಾಜಿದಾ ಹನೀಫ಼್  ಸೇರಿದಂತೆ ಇನ್ನಿತರರಿದ್ದರು.

ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕ ರಫ಼ಿ ರಿಪ್ಪನ್ ಪೇಟೆ ಸ್ವಾಗತಿಸಿದರು, ಗೌರವ ಸಂಪಾದಕ ಸೆಬಾಸ್ಟಿಯನ್ ಮ್ಯಾಥ್ಯೂಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version