January 11, 2026

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ – ಚೇತನ ಆರ್.ಪಿ.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಗ್ರಾಮೀಣ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ – ಚೇತನ ಆರ್.ಪಿ.

ರಿಪ್ಪನ್ ಪೇಟೆ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಮತ್ತು ಪ್ರತಿಭೆ ಅಪಾರವಾಗಿದೆ. ಪೋಷಕರು ಹಾಗೂ ಶಿಕ್ಷಕರು ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ, ಮುಂದಿನ ದಿನಗಳಲ್ಲಿ ಅವರು ಉತ್ತಮ ಪ್ರಜೆಗಳಾಗಿ ಬೆಳೆದು ಬರುವರು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಚೇತನ ಆರ್.ಪಿ. ಹೇಳಿದರು.

ಪಟ್ಟಣದ ಗುಡ್ ಶೆಪರ್ಡ್ ಶಾಲೆಯಲ್ಲಿ ಬಾಳೂರು ಮತ್ತು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಚೇತನ ಆರ್.ಪಿ. ಅವರು, ಪ್ರತಿಭಾ ಕಾರಂಜಿಯು ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮ ಸಾಂಸ್ಕೃತಿಕ ವೇದಿಕೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್, “ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಸರ್ಕಾರ ನೀಡಿರುವ ಅತ್ಯುತ್ತಮ ವೇದಿಕೆ ಇದಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಡ್ ಶೆಪರ್ಡ್ ಚರ್ಚ್ ಧರ್ಮಗುರು ರೆ. ಫಾ. ಬಿನೋಯ್ ವಹಿಸಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ಹೊಸನಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಬೆಳ್ಳೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಂಡಿ ಸೋಮಶೇಖರ್, ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಆಚಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಶೇಷಾಚಲ.ಜಿ ನಾಯಕ್, ಹೊಸನಗರ ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಬೆಳ್ಳೂರು ಶಿವಮೂರ್ತಿ, ಜಗದೀಶ್ ಕಾಗಿನಲ್ಲಿ, ಶಿವಪ್ಪ ಹೆಚ್.ಸಿ., ವನಜ, ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಗುಡ್ ಶೆಪರ್ಡ್ ಶಿಕ್ಷಣ ಸಂಸ್ಥೆಯ ಪೋಷಕರ ಸಮಿತಿ ಅಧ್ಯಕ್ಷ ತಂಗಚ್ಚನ್, ಕಾರ್ಯನಿರ್ವಾಹಕ ಮಂಡಳಿಯ ಸದಸ್ಯ ಸಬಾಸ್ಟಿನ್, ಮುಖ್ಯ ಶಿಕ್ಷಕಿ ಜೋಸ್ಪಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ಅಧಿಕಾರಿ ಮಂಜುನಾಥ್ ಎನ್ ಸ್ವಾಗತಿಸಿದರು. ಗುಡ್ ಶೆಪರ್ಡ್ ಶಿಕ್ಷಕ ಷಣ್ಮುಖ ನಿರೂಪಣೆ ನಡೆಸಿ, ಶಿಕ್ಷಕ ಮಂಜುನಾಥ್ ಆಚಾರ್ ವಂದನೆ ಸಲ್ಲಿಸಿದರು.

ರಿಪ್ಪನ್ ಪೇಟೆ ಮತ್ತು ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 17ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

About The Author

Exit mobile version