SSLC ಅಂಕಪಟ್ಟಿಯಲ್ಲಿ ಶಾಲೆಯ ಹೆಸರು ಗೊಂದಲ – ರಾಮಕೃಷ್ಣ ವಿದ್ಯಾಲಯದಲ್ಲಿ ಪೋಷಕರ ದಿಢೀರ್ ಪ್ರತಿಭಟನೆ
ರಿಪ್ಪನ್‌ಪೇಟೆ : ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಶಾಲೆಯ ಹೆಸರೇ ಬದಲಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಗಂಭೀರ ಅನಾಹುತ ಉಂಟು ಮಾಡಲಿದೆ ಎಂಬ ಅಸಮಾಧಾನದಿಂದಾಗಿ, ರಿಪ್ಪನ್‌ಪೇಟೆಯ ಶಾರದಾ ರಾಮಕೃಷ್ಣ ವಿದ್ಯಾಲಯದ ವಿರುದ್ಧ ಪೋಷಕರು ಇಂದು ದಿಢೀರ್ ಪ್ರತಿಭಟನೆ ನಡೆಸಿದರು.
ಕಳೆದ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದ ಬಳಿಕ ನೀಡಲಾಗುತ್ತಿರುವ ವರ್ಗಾವಣೆ ಪತ್ರದಲ್ಲಿ ಶಾರದಾ ರಾಮಕೃಷ್ಣ ವಿದ್ಯಾಲಯದ ಬದಲು ‘ಸರ್ಕಾರಿ ಪದವಿ ಪೂರ್ವ ಕಾಲೇಜು, ರಿಪ್ಪನ್‌ಪೇಟೆ’ ಎಂಬ ಹೆಸರು ಮುದ್ರಣವಾಗಿರುವುದರಿಂದ ಪೋಷಕರು ಉದ್ವಿಗ್ನಗೊಂಡಿದ್ದಾರೆ. ಅಂಕಪಟ್ಟಿ ಮತ್ತು ಶಾಲಾ ದಾಖಲೆಗಳ ನಡುವಿನ ಈ ಗೊಂದಲದಿಂದ ಮಕ್ಕಳ ಮುಂದಿನ ಪದವಿ ಪ್ರವೇಶ ಪ್ರಕ್ರಿಯೆಯಲ್ಲಿ ಅಡೆತಡೆಯಾಗುವ ಭೀತಿಯಿಂದ ಪೋಷಕರು ದಿಡೀರ್ ಪ್ರತಿಭಟನೆ ನಡೆಸಿದರು.
ಶಾಲೆ ಆವರಣದಲ್ಲೇ ಪೋಷಕರು ಸೇರಿ ತಮ್ಮ ಆತಂಕ ವ್ಯಕ್ತಪಡಿಸಿದ ವೇಳೆ, ಶಾಲೆಯ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ದೂರವಾಣಿ ಮೂಲಕ ಮಾತನಾಡಿ,“ಇದು ಶಿಕ್ಷಣ ಇಲಾಖೆಯ ತಾಂತ್ರಿಕ ದೋಷದಿಂದ ಸಂಭವಿಸಿದೆ. ವಿಷಯ ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನಕ್ಕೆ ತಂದಿದ್ದೇವೆ. ಸಚಿವರು ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದು, ಪ್ರಕರಣ ವಿಚಾರಣೆಗೊಳಪಟ್ಟಿದೆ. ಶೀಘ್ರದಲ್ಲೇ ನಮ್ಮ ಪರವಾಗಿ ಆದೇಶ ಬರುವ ನಿರೀಕ್ಷೆಯಿದೆ. ಪೋಷಕರು ಹತ್ತು ದಿನ ಅವಧಿ ನೀಡಿದರೆ ಎಲ್ಲಾ ತೊಂದರೆಗಳನ್ನು ಸರಿಪಡಿಸಲಾಗುವುದು. ಮಕ್ಕಳಿಗೆ ಅನ್ಯಾಯವಾಗದಂತೆ ಸಂಪೂರ್ಣ ಜವಾಬ್ದಾರಿ ನಾವು ತೆಗೆದುಕೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಅಧ್ಯಕ್ಷರ ಭರವಸೆಯೊಂದಿಗೆ ಪೋಷಕರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಂಡರು.
ಈ ಸಂದರ್ಭ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯತ್ ಸದಸ್ಯ ಆರ್.ವಿ. ನಿರೂಪ್ ಕುಮಾರ್, ಪ್ರಕಾಶ್ ಪಾಲೇಕರ್, ಉಮಾ ಸುರೇಶ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗೇಶ ಚಂದಳ್ಳಿ, ನಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.




