
ಶಿವಮೊಗ್ಗದಲ್ಲಿ ಸರಣಿ ಅಪಘಾತ – ಓರ್ವ ಗಂಭೀರ , ಮೂವರಿಗೆ ಗಾಯ
ಶಿವಮೊಗ್ಗ ನಗರ ಆಯನೂರು ಗೇಟ್ ಬಳಿ ಭಾನುವಾರ ಮಧ್ಯಾಹ್ನ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು, ಮೂವರಿಗೆ ಗಾಯಗಳಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಪಘಾತದಲ್ಲಿ ಗಾಯಗೊಂಡ ಮೂವರಲ್ಲಿ ಒಬ್ಬರಿಗೆ ತೀವ್ರ ರೀತಿಯಲ್ಲಿ ತಲೆಗೆ ಪೆಟ್ಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಫುಡ್ ಡೆಲಿವರಿ ಬಾಯ್ ಸಿಗ್ನಲ್ ಬ್ರೇಕ್ ಮಾಡಿ ಅಜಾಗರೂಕವಾಗಿ ಬೈಕ್ ಚಲಾಯಿಸಿದ್ದು, ಇದನ್ನು ತಪ್ಪಿಸಲು ಶರಾವತಿ ನಗರದ ಕಡೆಯಿಂದ ಬರುತ್ತಿದ್ದ ಎರಿಟಿಗಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿದೆ. ನಂತರ ಸಿಗ್ನಲ್ ಬಳಿ ನಿಂತಿದ್ದ ಇತರೆ ವಾಹನಗಳ ಮೇಲೆ ಹರಿದು ಸರಣಿ ಅಪಘಾತಕ್ಕೆ ಕಾರಣವಾಗಿದೆ.
ಈ ಅವಘಡದಲ್ಲಿ ಮೂರು ಬೈಕ್‌ಗಳು ಹಾಗೂ ಎರಡು ಕಾರುಗಳು ಜಖಂ ಆಗಿದ್ದು, ಕಿರಣ್, ಅರುಣ್ ಮತ್ತು ಪ್ರವೀಣ ಎಂದು ಗುರುತಿಸಲಾದ ಯುವಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕಾರ್ಯಾಚರಣೆ ಭಾಗವಾಗಿ ಅಪಘಾತಕ್ಕೊಳಗಾದ ವಾಹನಗಳನ್ನು ಠಾಣೆಗೆ ರವಾನಿಸಲಾಗಿದ್ದು, ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



