ಯಕ್ಷಗಾನ ಕಲಾವಿದರಿಗೆ ರಾಜಾಶ್ರಯ ಸದಾ ಅವಶ್ಯ: ಹಿರಿಯ ಕಲಾವಿದ ಪುರಂದರ ಹೆಗಡೆ ಅಭಿಮತ.
ಹೊಸನಗರ: ದೇಶದ ಸಾಂಸ್ಕೃತಿಕ ಪರಂಪರೆಯ ಹಿರಿಯ ಕಲಾ ಪ್ರಕಾರಗಳಲ್ಲಿ ಒಂದಾದ ಯಕ್ಷಗಾನ ಕಲೆ ಆರಾಧಕರಾದ ಯಕ್ಷ ಕಲಾವಿದರಿಗೆ ರಾಜಾಶ್ರಯ ಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸಾಧಕ ಪ್ರತಿಭಾವಂತ ಹಿರಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಬೇಕಾಗಿದೆ ಎಂದು ಹಿರಿಯ ಕಲಾವಿದ ಪುರಂದರ ಹೆಗಡೆ ಹೇಳಿದರು.
ತಾಲ್ಲೂಕಿನ ಕಾರ್ಗಿಲ್ ಸಿದ್ಧಿವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನಡೆದ ಹೆರಂಜಾಲು ಷಷ್ಠಬ್ಬಿ ಯಕ್ಷ ಕಾರ್ಯಕ್ರಮದಲ್ಲಿ ಕೂಡ ಮಾಡುವ ಹೆರಂಜಾಲು ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಲೆ ಉಳಿದು ಬೆಳೆಯುವಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಕಲಾವಿದರಿಗೆ ಸರ್ಕಾರ ಸದಾ ಎಲ್ಲಾ ತೆರನಾದ ಪ್ರೋತ್ಸಾಹ ನೀಡಬೇಕಾಗಿದೆ. ಕನ್ನಡ ನಾಡು ನುಡಿ, ನೆಲ ಜಲ, ಇಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ಕಲಾವಿದರ ಪಾತ್ರ ದೊಡ್ಡದು. ಯಕ್ಷಗಾನ ಕಲಾ ಪ್ರಾಕಾರದಲ್ಲಿ ಶುದ್ದ ಕನ್ನಡವನ್ನೇ ಪ್ರಯೋಗಿಸಲಾಗುತ್ತಿದೆ. ಪದ್ಯ ಅರ್ಥದಲ್ಲಿ ಕನ್ನಡ ಭಾಷೆ ಬಳಸಲಾಗುತ್ತದೆ. ಕಲಾವಿದ ಎಲ್ಲೂ ಆಂಗ್ಲ ಭಾಷೆ ಬಳಸುವುದಿಲ್ಲ. ಕನ್ನಡ ನಾಡು ನುಡಿ ರಕ್ಷಣೆಗೆ ಯಕ್ಷಗಾನ ಕಲಾವಿದರು ಅಳಿಲು ಸೇವೆ ಮಾಡುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಯಕ್ಷಗಾನ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಬೇಕು. ಹೆಚ್ಚು ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಯಕ್ಷಗಾನದತ್ತ ಹರಿದು ಬರಬೇಕು ಎಂದರು.
ಹಿರಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗ ಆಶಯ ಭಾಷಣ ಮಾಡಿದರು. ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಹ್ಮಣ್ಯ ಹನಿಯ , ಮಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಪತ್ರಕರ್ತ ನಾರವಿ ಹೊಸನಗರ, ಕಣಿವೆ ಬಾಗಿಲು ಶಂಕರಭಟ್, ಹಿರಿಯ ಭಾಗವತ ಮಾರ್ವಿ ನಿತ್ಯಾನಂದ ಹೆಬ್ಬಾರ್ ಮತ್ತಿತರರು ಇದ್ದರು.
ನಂತರ ಹೆರಂಜಾಲು ಯಕ್ಷ ಬಳಗ ವತಿಯಿಂದ ಪಂಚವಟಿ ಹಾಗೂ
ಶ್ರೀ ಕೃಷ್ಣ ಪರಂಧಾಮ ಪ್ರಸಂಗ ಪ್ರದರ್ಶನ ನಡೆಯಿತು.
ಕಲಾವಿದರಾಗಿ ಹೆರಂಜಾಲು ಗೋಪಾಲ ಗಾಣಿಗ, ಉದಯ ಹೊಸಾಳ, ರಾಘವೇಂದ್ರ ಹೆಗಡೆ, ಶಶಿಕಾಂತ ಶೆಟ್ಟಿ ಕಾರ್ಕಳ, ಈಶ್ವರ ನಾಯ್ಕ ಮಂಕಿ, ಚಂದ್ರ ಕುಲಾಲ್ ನೀರ್ಜಡ್ಡು, ಶೇಖರ್ ಶೆಟ್ಟಿ ಮತ್ತಿತರರು ಇದ್ದರು.
ಪತ್ರಕರ್ತೆ ಅಶ್ವಿನಿ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.
ಚಿತ್ರ. ಹೊಸನಗರ ತಾಲ್ಲೂಕಿನ ಕಾರ್ಗಡಿ ಸಿದ್ಧಿವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಪುರಂದರ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
