ಮದುವೆ ವಿವಾದ – ಇಬ್ಬರು ಯುವಕರಿಗೆ ಚೂರಿ ಇರಿತ
ಶಿವಮೊಗ್ಗ ನಗರದಲ್ಲಿನ ಊರುಗಡೂರು ಬಡಾವಣೆಯಲ್ಲಿ ನಡೆದ ವೈಯಕ್ತಿಕ ಗಲಾಟೆ ಎರಡು ಕುಟುಂಬಗಳ ನಡುವೆ ಭೀಕರ ರೂಪ ಪಡೆದು, ಇಬ್ಬರು ಯುವಕರು ಮಾರಕಾಸ್ತ್ರದ ಇರಿತಕ್ಕೊಳಗಾಗಿರುವ ಘಟನೆ ನಡೆದಿದೆ.
ಗಾಯಗೊಂಡ ಶಬ್ಬೀರ್ ಹಾಗೂ ಶಹಬಾಜ್ ಎಂಬವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿ, “ಇದು ಸಂಪೂರ್ಣವಾಗಿ ವೈಯಕ್ತಿಕ ವಿಚಾರದಿಂದ ನಡೆದ ಘಟನೆ. ಶಬ್ಬೀರ್‌ನ ಸಹೋದರಿಯ ಗಂಡ ಫಾರ್ದಿನ್, ಆತನ ಸಹೋದರ ಹಾಗೂ ಸ್ನೇಹಿತ ಸೇರಿ ದಾಳಿ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.
ಹಿನ್ನೆಲೆ ಪ್ರಕಾರ, ಶಬ್ಬೀರ್‌ನ ಸಹೋದರಿ ಮತ್ತು ಫಾರ್ದಿನ್ ಕೆಲವು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಕುಟುಂಬದ ವಿರೋಧದ ಮಧ್ಯೆಯೇ ನಡೆದಿದ್ದ ಈ ಮದುವೆ ಇತ್ತೀಚೆಗೆ ಪ್ರತ್ಯೇಕತೆಗೆ ದಾರಿ ಮಾಡಿಕೊಟ್ಟಿತ್ತು. ಇದೇ ವಿಚಾರದಿಂದ ಉಂಟಾದ ವೈಮನಸ್ಸು ಕೋಪಕ್ಕೆ ತಿರುಗಿ ಇರಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆ ಹಾಗೂ ತನಿಖೆ ಮುಂದುವರಿದಿದೆ.
