RIPPONPETE | 22 ವರ್ಷ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ
RIPPONPETE | 22 ವರ್ಷದ ರಾಷ್ಟ್ರ ಸೇವೆ ಸಲ್ಲಿಸಿ ತವರಿಗೆ ಹಿಂದಿರುಗಿದ ಹೆಮ್ಮೆಯ ಯೋಧನಿಗೆ ಅದ್ದೂರಿ ಸ್ವಾಗತ
ರಿಪ್ಪನ್‌ಪೇಟೆ: ದೇಶರಕ್ಷಣೆಯ ಕರ್ತವ್ಯವನ್ನು 22 ದೀರ್ಘ ವರ್ಷಗಳ ಕಾಲ ನಿರಂತರವಾಗಿ ನಿಭಾಯಿಸಿ ಗೌರವಪೂರ್ವಕ ನಿವೃತ್ತರಾಗಿರುವ ಗಿರೀಶ್ ಅವರು ತಮ್ಮ ಹೆಮ್ಮೆಯ ನಾಡಿಗೆ ಭಾನುವಾರ ಸಂಜೆ ಆಗಮಿಸಿದ್ದು ಗ್ರಾಮಸ್ಥರು ಅದ್ಭುತವಾದ ಗೌರವ ಸಮರ್ಪಣೆಯ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು.
ಮೆಸ್ಕಾಂನ ನಿವೃತ್ತ ಉದ್ಯೋಗಿ ಮೋಹನ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರನಾದ ಗಿರೀಶ್, 2003ರಲ್ಲಿ ಭಾರತೀಯ ಸೇನೆಗೆ ಸೇರಿದ್ದು ದೇಶದ ವಿವಿಧ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಜಮ್ಮು-ಕಾಶ್ಮೀರದ ಹಿಮಪರ್ವತಗಳಿಂದ ಹಿಡಿದು ರಾಜಸ್ಥಾನದ ಉಷ್ಣ ಮರುಭೂಮಿವರೆಗೆ, ದೇಶದ ಸುರಕ್ಷತೆಗಾಗಿ ತಮ್ಮ ಜೀವನದ ಶ್ರೇಷ್ಠ ವರ್ಷಗಳನ್ನು ಕರ್ತವ್ಯಕ್ಕೆ ಸಮರ್ಪಿಸಿದ್ದರು.
ರಿಪ್ಪನ್‌ಪೇಟೆಯ ವಿನಾಯಕ ವೃತ್ತಕ್ಕೆ ಗಿರೀಶ್ ಆಗಮಿಸುತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ, ದೇಶಪರ ಘೋಷಣೆಯೊಂದಿಗೆ , ಸನ್ಮಾನದೊಂದಿಗೆ ಅವರನ್ನು ಊರ ಹೃದಯಬಾಗಿಲು ತೆರೆದು ಸ್ವಾಗತಿಸಿದರು. ಸಿಹಿ ಹಂಚಿ ಹರ್ಷಭರಿತ ಕ್ಷಣವನ್ನು ಸಂಭ್ರಮಿಸಿದರು. ಯುವಕರು “ಭಾರತ ಮಾತಾ ಕಿ ಜಯ”, “ಜೈ ಜವಾನ್” ಘೋಷಣೆಗಳನ್ನು ಕೂಗುತ್ತ ಊರಿನ ಶಕ್ತಿ ಮತ್ತು ಸಂಭ್ರಮವನ್ನು ಹೆಚ್ಚಿಸಿದರು.
ಈ ಸಂಧರ್ಭದಲ್ಲಿ ಸ್ಥಳೀಯರು ಮಾತನಾಡಿ “ಇಂದು ನಮ್ಮ ಗ್ರಾಮದ ಮಣ್ಣಿನ ಒಡಲು ಗರ್ವದಿಂದ ತಲೆ ಎತ್ತಿದೆ , ನಿಜವಾದ ರಿಯಲ್ ಹೀರೋ ಎಂದರೆ ಇಂತಹ ಯೋಧರು” , “ನಮ್ಮ ನೆಲದ ಮಗ ಸೇನೆಗೆ ಹೋಗಿ ಗೌರವದೊಂದಿಗೆ ಮರಳಿರುವುದು ನಮ್ಮ ಅದೃಷ್ಟ ಹಾಗೂ ಹೆಮ್ಮೆ” ಎಂದರು.
ನಿವೃತ್ತ ಯೋಧ ಗಿರೀಶ್ ಮಾತನಾಡಿ, “ಈ ಗೌರವ ನನ್ನ ವೈಯಕ್ತಿಕದ್ದು ಅಲ್ಲ, ಇದು ಭಾರತೀಯ ಸೇನೆಗೆ ಸಲ್ಲುವ ಗೌರವ. ಈ ನೆಲ, ಈ ಮಣ್ಣು, ಈ ಜನರ ಆಶೀರ್ವಾದದ ಕಾರಣಕ್ಕೆ ನಾನು ದೇಶಕ್ಕೆ ಸುಧೀರ್ಘ ಸೇವೆ ಸಲ್ಲಿಸಿದ್ದೇನೆ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ನೇಹಿತರು, ಗ್ರಾಮಪಂಚಾಯಿತಿ ಸದಸ್ಯರು, ಹಿತೈಷಿಗಳು , ಹಿರಿಯರು, ಮಹಿಳಾ ಸಂಘದ ಪ್ರತಿನಿಧಿಗಳು ಹಾಗೂ ಬಹುತೇಕ ಗ್ರಾಮಸ್ಥರು ಪಾಲ್ಗೊಂಡು ಶುಭ ಹಾರೈಸಿದರು.
