ಬ್ರಾಹ್ಮಣ ವಿದ್ಯಾರ್ಥಿನಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ್ದ ಶಿಕ್ಷಕ – ಈಗ ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕ!!
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪಾಠ ಬೋಧನೆ, ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಶ್ರಮ, ಹೊಸ ತಾಂತ್ರಿಕ ಜ್ಞಾನ ಹೀಗೆ ಹಲವು ಗುಣಗಳನ್ನು ತೂಗಿ ನೋಡುತ್ತಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಾರೆ ಎಂಬುದು ಕೇವಲ ಕಾಗದದ ಮಾತು ಎಂಬುವುದಕ್ಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯೊಂದರ ಮಹಾನುಭಾವ ಶಿಕ್ಷಕರು ಪಡೆದಿರುವ ಈ ಬಾರಿಯ ಜಿಲ್ಲಾ ಮಟ್ಟದ ಪ್ರಶಸ್ತಿ ಅದಕ್ಕೆ ನಿದರ್ಶನ.
ಹೌದು, 2023ರ ನವೆಂಬರ್ 21ರಂದು ತಾಲೂಕಿನ ಕೆಪಿಎಸ್ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತಿದ್ದ ಬ್ರಾಹ್ಮಣ ವಿದ್ಯಾರ್ಥಿನಿಗೆ ಬಲವಂತವಾಗಿ ಮೊಟ್ಟೆ ತಿನ್ನಿಸಿದ ಘಟನೆಯ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವಿಸ್ಕೃತ ವರದಿ ಮಾಡಿತ್ತು ಆ ನಂತರದಲ್ಲಿ ಘಟನೆ ಬಗ್ಗೆ ರಾಜ್ಯಮಟ್ಟದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಪೋಷಕರ ದೂರಿನ ನಂತರ ಶಿಕ್ಷಣಾಧಿಕಾರಿಗಳು ತನಿಖೆ ನಡೆಸಿ, ಪ್ರಕರಣ ನಿಜವೆಂದು ದೃಢಪಡಿಸಿದರು. ಕೊನೆಗೆ ಶಿಕ್ಷಕರು ಪೋಷಕರ ಬಳಿ ಕ್ಷಮೆಯಾಚನೆ ಸಲ್ಲಿಸಿ “ಮೊಟ್ಟೆಯ ಅಧ್ಯಾಯ” ಮುಗಿಸಿದಂತೆ ಮಾಡಲಾಯಿತು. ಈ ಘಟನೆಯ ಕುರಿತಂತೆ ಬ್ರಾಹ್ಮಣ ಮಹಾಸಭೆಯ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ , ಡಿಡಿಪಿಐ ರವರಿಗೆ ದೂರು ಸಹ ನೀಡಿದ್ದರು..
ಆದರೆ ಕಾಲ ಬದಲಾಗಿದೆ – ಆ ಮೊಟ್ಟೆ ಪ್ರಕರಣದ ಪಾತ್ರಧಾರಿ ಈಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ವಿವಾದಿತ ಕೃತ್ಯಗಳಿಂದ ಹೆಸರು ಮಾಡಿರುವವರಿಗೆ ಪ್ರಶಸ್ತಿ ದೊರಕುವುದರಿಂದ ನಿಸ್ವಾರ್ಥವಾಗಿ ಶ್ರಮಿಸುವ ನೂರಾರು ಶಿಕ್ಷಕರ ಮನಸ್ಸಿಗೆ ಕಹಿ ಮೂಡಿಸುತ್ತದೆ. ವಿದ್ಯಾರ್ಥಿಗಳ ಹಿತಕ್ಕಾಗಿ ಶಾಂತವಾಗಿ ಸೇವೆ ಮಾಡುವವರ ಕೊಡುಗೆ ಮಣ್ಣಿನಲ್ಲಿ ಹೂತು ಹೋಗಿ, ಅಪ್ರಸ್ತುತ ಘಟನೆಗಳ ಮೂಲಕ ಪ್ರಸಿದ್ಧಿ ಪಡೆದವರು ಮೆಟ್ಟಿಲೇರಿದರೆ, ಅದು ಶಿಕ್ಷಣ ಕ್ಷೇತ್ರದ ನೀತಿಗೆ ಧಕ್ಕೆ ತರುತ್ತದೆ. ಇಂತಹ ಸಂದರ್ಭಗಳು ನಿಜವಾದ ಸೇವಕರ ಮೌಲ್ಯವನ್ನು ಮಸುಕುಮಾಡುವ ವ್ಯಂಗ್ಯಮಯ ಸತ್ಯ.
ಆಹಾರ ಎಂಬುದು ಕೇವಲ ಹೊಟ್ಟೆ ತುಂಬಿಸುವ ವಸ್ತುವಲ್ಲ, ಅದು ಸಂಸ್ಕೃತಿ, ಸಂಪ್ರದಾಯ, ನಂಬಿಕೆ ಹಾಗೂ ವೈಯಕ್ತಿಕ ಭಾವನೆಯ ಪ್ರತಿಬಿಂಬ. ಪ್ರತಿಯೊಬ್ಬರಿಗೂ ತಮ್ಮ ಇಚ್ಛೆಯಂತೆ ತಿನ್ನುವ ಹಕ್ಕಿದೆ. ಯಾರಿಗೂ, ಯಾವ ಕಾರಣಕ್ಕೂ, ಒತ್ತಾಯವಾಗಿ ಆಹಾರವನ್ನು ಬದಲಾಯಿಸಲು ಅಥವಾ ತಿನ್ನಿಸಲು ಹಕ್ಕಿಲ್ಲ. ಒಂದು ಸಣ್ಣ ಬಲವಂತದ ಕೃತ್ಯವೇ ಮಗುವಿನ ಮನಸ್ಸಿನಲ್ಲಿ ಆಳವಾದ ಗಾಯ ಬಿಟ್ಟು ಹೋಗಬಹುದು. ಶಿಕ್ಷಣ ನೀಡುವ ಶಿಕ್ಷಕರ ಕೈಯಲ್ಲಿ ಪುಸ್ತಕ ಇರಬೇಕು, ಬಲವಂತದ ಆಹಾರವಲ್ಲ. ಮಕ್ಕಳ ಹೃದಯ ಗೆಲ್ಲುವವರು ನಿಜವಾದ ಶಿಕ್ಷಕರು, ಬಲವಂತ ಮಾಡುವವರು ಅಲ್ಲ. ಆಹಾರವು ಅವರವರ ಹಕ್ಕು – ಅದನ್ನು ಕಸಿದುಕೊಳ್ಳುವ ಪ್ರಯತ್ನವೇ ಮಾನವೀಯತೆಗೆ ವಿರುದ್ಧ.
– ರಫ಼ಿ ರಿಪ್ಪನ್ ಪೇಟೆ