ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಅದ್ದೂರಿ ಪದಗ್ರಹಣ ಸಮಾರಂಭ – ನೂತನ ಅಧ್ಯಕ್ಷೆ ಶ್ವೇತಾ ಬಂಡಿ ಹೇಳಿದ್ದೇನು.!?
ಶಿವಮೊಗ್ಗ : ನೂತನ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿರುವ ಶ್ವೇತಾ ಬಂಡಿ ಅದ್ದೂರಿ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ತುಂಗಭದ್ರಾ ನದಿಯಷ್ಟು ಬೃಹತ್ ಶಕ್ತಿ ತುಂಬಿದೆ ಎಂದು ಬಣ್ಣಿಸಿದರು. ಬಂಜಾರ ಕನ್ವೆಕ್ಷನ್ ಹಾಲ್‌ನಲ್ಲಿ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಮಾಜದಲ್ಲಿ ಧ್ವನಿ ಇಲ್ಲದ ಮಹಿಳೆಯರನ್ನು ನಾಲ್ಕು ಗೋಡೆಗಳ ನಡುವೆ ಇಡದೆ, ಅವರಿಗೆ ಶಕ್ತಿ ತುಂಬಿ ಸಬಲೀಕರಣಗೊಳಿಸಿದೆ. ‘ಇದು ಒಂದು ಮೈಲಿಗಲ್ಲು’ ಎಂದು ಶ್ವೇತಾ ಬಂಡಿ ಬಣ್ಣಿಸಿದರು.
ಮಹಿಳಾ ಸಬಲೀಕರಣ ಕೇವಲ ಮಾತಿನಲ್ಲಿ ಉಳಿಯದೆ ವಾಸ್ತವಕ್ಕೆ ಬರಬೇಕು. ತಮ್ಮ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ಸ್ಮರಿಸಿದ ಅವರು, ಮಹಿಳೆಯರ ಪ್ರಗತಿಗೆ ಕುಟುಂಬ ವ್ಯವಸ್ಥೆ ಪೂರಕವಾಗಿರಬೇಕು ಎಂದರು. ಮಹಿಳಾ ಮೀಸಲಾತಿ ಜಾರಿಯಾದಾಗ ತಮ್ಮ ತಂದೆ ರಾಮಚಂದ್ರ ಬಂಡಿಯವರಿಗೆ ಟಿಕೆಟ್ ತಪ್ಪಿದರೂ, ಇಡೀ ಕುಟುಂಬವು ತಮಗೆ ರಾಜಕೀಯ ಶಕ್ತಿ ನೀಡಿದ್ದನ್ನು ಸ್ಮರಿಸಿದರು. ತಮ್ಮ ಕುಟುಂಬವು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಬೆಂಬಲಿಗ ಎಂದು ಸ್ಪಷ್ಟಪಡಿಸಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಚುಕ್ಕಾಣಿ ಹಿಡಿಯುವ ಮೂಲಕ ನಿಜವಾದ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದರು ಎಂದು ಶ್ವೇತಾ ಬಂಡಿ ತಿಳಿಸಿದರು.
‘ಬಿಟ್ಟಿ ಭಾಗ್ಯ’ ಎನ್ನುವವರಿಗೆ ದಿಕ್ಕಾರ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ ಭಾಗ್ಯ’ ಎಂದು ಟೀಕಿಸುವವರಿಗೆ ಇದೇ ವೇದಿಕೆಯ ಮೂಲಕ ಶ್ವೇತಾ ಬಂಡಿ ದಿಕ್ಕಾರ ಘೋಷಿಸಿದರು. ಈ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ಒದಗಿಸಿವೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಈ ಸಂದರ್ಭದಲ್ಲಿ ದಿವಂಗತ ಎಸ್. ಬಂಗಾರಪ್ಪ ಅವರನ್ನು ಸ್ಮರಿಸಿದ ಅವರು, ಅವರು ಜಾರಿಗೆ ತಂದ ಅನೇಕ ಯೋಜನೆಗಳು ಮಹಿಳೆಯರಿಗೆ ಬಲ ನೀಡಿವೆ. ತಾವು ಸತ್ಯಕ್ಕಾಗಿ ಮತ್ತು ಸಾಮಾಜಿಕ ಸಮಾನತೆಗಾಗಿ ಸದಾ ಶ್ರಮಿಸುವುದಾಗಿ ಶ್ವೇತಾ ಬಂಡಿ ಭರವಸೆ ನೀಡಿದರು.
