Headlines

ಅಮ್ಮನಘಟ್ಟ ದೇವಸ್ಥಾನ ವಿಕಾಸಕ್ಕೆ ಅಗತ್ಯ ಕ್ರಮ : ಸಚಿವ ಮಧು ಬಂಗಾರಪ್ಪ

ಅಮ್ಮನಘಟ್ಟ ದೇವಸ್ಥಾನ ವಿಕಾಸಕ್ಕೆ ಅಗತ್ಯ ಕ್ರಮ : ಸಚಿವ ಮಧು ಬಂಗಾರಪ್ಪ

ಹೊಸನಗರ ತಾಲೂಕಿನ ಕೊಡೂರು ಸಮೀಪದ ಜೇನುಕಲ್ಲಮ್ಮ ದೇವಸ್ಥಾನದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ನವರಾತ್ರಿ ಅಂಗವಾಗಿ ಜೇನುಕಲ್ಲಮ್ಮದೇವಿಯ ದರ್ಶನ ಪಡೆದ ನಂತರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಇದೊಂದು ಐತಿಹಾಸಿಕ ದೇವಸ್ಥಾನವಾಗಿದ್ದು, ಚಂದ್ರಗುತ್ತಿ ಮಾದರಿಯಲ್ಲಿ ಕೋಡೂರು ದೇವಿಯ ಸ್ಥಳವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕವಾಗಿ ನೆರವಿನೊಂದಿಗೆ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ತಜ್ಞರ ಸಲಹೆ ಹಾಗೂ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು.

ಭಾರೀ ಪ್ರಮಾಣದ ದೇವಿ ಆರಾಧಕರು ಹಾಗೂ ಉಪಾಸಕರು ಇರುವುದು ತಿಳಿದಿದೆ. ಇಲ್ಲಿಗೆ ಆಗಮಿಸುವ ಭಕ್ತರ ಅವಶ್ಯಕತೆಗಳಿಗೆ ಪೂರಕವಾಗಿ ಪ್ರವಾಸಿ ಕೇಂದ್ರವನ್ನಾಗಿ ಸೃಷ್ಟಿಸುವ ಆಶಯ ತಮಗಿರುವುದಾಗಿ ತಿಳಿಸಿದರು.

ಚಂದ್ರಗುತ್ತಿಯನ್ನು ಸರ್ಕಾರವು ಈಗಾಗಲೇ ಪ್ರಾಧಿಕಾರವನ್ನಾಗಿ ಘೋಷಿಸಿದ್ದು, ಅದರ ಜೀರ್ಣೋದ್ದಾರದ ಕೆಲಸಗಳಿಗಾಗಿ ಮೊದಲ ಕಂತಿನ ಅನುದಾನ ಶೀಘ್ರವೇ  ಬಿಡುಗಡೆಗೊಂಡು ಕಾರ್ಯರಂಭಗೊಳ್ಳಲಿದೆ ಎಂದು ಅವರು, ಅಲ್ಲಿನ ಹತ್ತು ಯಕರೆ ಅರಣ್ಯ ಭೂಮಿಯನ್ನು ಸರ್ಕಾರದ ಪರ್ಯಾಯ ಭೂಮಿ ಕೊಟ್ಟು ಪಡೆದುಕೊಳ್ಳಲಾಗಿದ್ದು, ಅಭಿವೃದ್ಧಿ ಕಾರ್ಯಕ್ಕೆ ಕ್ರಮಕೈಗೊಳ್ಳಲಾಗಿದೆ , ಎತ್ತರದ ಸ್ಥಳದಲ್ಲಿ ಸ್ಥಾಪಿತವಾಗಿರುವ ದೇವರ ಸನ್ನಿಧಿ, ಆಕರ್ಷಕ ಪರಿಸರ ಹೊಂದಿದೆ. ಅಲ್ಲದೆ ಜೇನುಕಲ್ಲಮ್ಮ ದೇವಿಯ ಪ್ರದೇಶದ ವಿಕಾಸಕ್ಕಾಗಿ ಇಲ್ಲಿನ ಆಡಳಿತ ಮಂಡಳಿ ಸುಮಾರು 26 ಎಕರೆ ಭೂ ಪ್ರದೇಶ ಕಾಯ್ದೆರಿಸಿರುವುದು ಉತ್ತಮವಾಗಿದೆ ಎಂದರು.

ರಾಜ್ಯದಲ್ಲಿ ಉದ್ದೇಶಿತ ಕೆ. ಪಿ. ಎಸ್. ಶಾಲೆಗಳನ್ನು 500 ರಿಂದ 850ಕ್ಕೆ ಹೆಚ್ಚಿಸಿ ಇತ್ತೀಚಿಗೆ ನಡೆದ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇಲ್ಲಿನ ಜನರ ಕೋರಿಕೆಯಂತೆ ಕೊಡೂರಿಗೂ ಒಂದು  ಕೆ. ಪಿ. ಎಸ್. ಶಾಲೆಯನ್ನು ಮಂಜೂರು ಮಾಡಲಾಗುವುದು ಎಂದರು.

ಇಲ್ಲಿನ ಬಗರ್ ಹುಕುಂ ಸಾಗುವಳಿದಾರರನ್ನು, ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸದಂತೆ ಸರ್ಕಾರವು ಈಗಾಗಲೇ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ,ರಾಜ್ಯದ ಜನರ ಹಿತ ಸುಖ ಕಾಯುವಲ್ಲಿ ಸರ್ಕಾರ ಬದ್ಧವಾಗಿದ್ದು, ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಆಸರೆ ಒದಗಿಸುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಗಣತಿ ಕಾರ್ಯವನ್ನು ಕೈಗೆಟ್ಟಿಕೊಂಡಿದೆ ಎಂದರು.

ಸಭೆಯಲ್ಲಿ ಮುಖಾಂಡರಾದ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಎರಗಿ ಉಮೇಶ್,   ಶ್ವೇತಾ ಬಂಡಿ, ಬಿ ಜಿ ಚಂದ್ರಮೌಳಿ,  ರಮೇಶ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Exit mobile version