Headlines

DIGITAL ARREST | ವಿಡಿಯೋ ಕರೆಯಲ್ಲೇ ವ್ಯಕ್ತಿಗೆ 19 ಲಕ್ಷ ರೂ. ವಂಚನೆ

DIGITAL ARREST | ವಿಡಿಯೋ ಕರೆಯಲ್ಲೇ ವ್ಯಕ್ತಿಗೆ 19 ಲಕ್ಷ ರೂ. ವಂಚನೆ

ಶಿವಮೊಗ್ಗ:  ವಿಡಿಯೋ ಕಾಲ್‌ನಲ್ಲೇ ಅರೆಸ್ಟ್ ಮಾಡಿ, ವಿಡಿಯೋ ಕಾಲ್‌ನಲ್ಲೇ ಬೇಲ್ ಕೊಡಿಸಿ ಹಣ ಪಡೆದು ವಂಚಿಸಿದ ಘಟನೆ  ಶಿವಮೊಗ್ಗದಲ್ಲಿ ನಡೆದಿದ್ದು,  ವ್ಯಕ್ತಿಯೊಬ್ಬರಿಗೆ ೧೯ ಲಕ್ಷ ರೂ. ವಂಚಿಸಲಾಗಿದೆ.

ಶಿವಮೊಗ್ಗದ ನಿವೃತ್ತ ಉದ್ಯೋಗಿಯೊಬ್ಬರನ್ನು ಗುರಿಯಾಗಿಸಿ ವಾಟ್ಸಪ್‌ನಲ್ಲಿ ವಿಡಿಯೋ ಕಾಲ್ ಮಾಡಲಾಗಿದೆ. ಮುಂಬೈನ ಕೊಲಾಬ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿಖಾವತ್ ಎಂದು ಆತ ಪರಿಚಯಿಸಿಕೊಂಡಿದ್ದ. ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರಿದೆ. ಹಾಗಾಗಿ ಈ ಕೂಡಲೆ ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.

ಮರುದಿನ ಪುನಃ ವಿಡಿಯೋ ಕಾಲ್ ಮಾಡಿ ನ್ಯಾಯಾಲಯದಲ್ಲಿ ನಿಮಗೆ ಜಾಮೀನು ಕೊಡಿಸುತ್ತೇವೆ ಎಂದು ನಂಬಿಸಿದ್ದ. ಮತ್ತೊಂದು ವಿಡಿಯೋ ಕರೆಯಲ್ಲಿ ಕೋರ್ಟ್ ಮಾದರಿ ಹಿನ್ನಲೆ, ನ್ಯಾಯಾಧೀಶರೊಬ್ಬರು ಕುಳಿತಿರುವಂತಿತ್ತು. ನ್ಯಾಯಾಧೀಶನಂತಿದ್ದ ವ್ಯಕ್ತಿ ಶಿವಮೊಗ್ಗದ ನಿವೃತ್ತ ಉದ್ಯೋಗಿಯ ಮಾಹಿತಿ ಕೇಳಿದ. ತದನಂತರ ೧೯ ಲಕ್ಷ ಕೊಡಬೇಕು ಎಂದು ಬೆದರಿಸಿದ್ದಾರೆ.

ಆತಂಕದಲ್ಲಿ ನಿವೃತ್ತ ಉದ್ಯೋಗಿಯು ಬ್ಯಾಂಕ್‌ನಲ್ಲಿ ಚಿನ್ನದ ಮೇಲೆ ಸಾಲ ಪಡೆದು ವಂಚಕರು ಹೇಳಿದ ಖಾತೆಗೆ ಹಣ ವರ್ಗಾಯಿಸಿದ್ದಾರೆ.ಕೊನೆಗೆ ತಾವು ಮೋಸ ಹೋಗಿರುವ ಅರಿವಾಗಿದ್ದು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version