RIPPONPETE | ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ | ಖಾಕಿಯಿಂದ ಬಿಗಿ ಭದ್ರತೆ
ರಿಪ್ಪನ್‌ಪೇಟೆ:– ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸೇವಾ ಸಮಿತಿಯ 58ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕೆಲವೇ ಹೊತ್ತಿನಲ್ಲಿ ವಿಸರ್ಜನಾ ಪೂರ್ವ ಪೂಜೆ ನೆರವೇರಲಿದ್ದು, ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ರಾಜಬೀದಿ ಉತ್ಸವದ ಅಂಗವಾಗಿ ಗಣಪತಿ ಸ್ವಾಮಿಯ ರಥವನ್ನು ಭಕ್ತರು ಅದ್ಧೂರಿಯಾಗಿ ಅಲಂಕರಿಸಿದ್ದು, ಭಜನೆ–ಗೋಷ್ಠಿ, ಸಂಗೀತ, ವಾದ್ಯಮೇಳಗಳೊಂದಿಗೆ ಪಟ್ಟಣದ ಬೀದಿಗಳಲ್ಲಿ ಸಂಚರಿಸಲು ಸಜ್ಜಾಗಿದೆ.
ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳು ಈಗಾಗಲೇ ಕೇಸರಿಮಯ ವಾತಾವರಣದಿಂದ ತೇಜಸ್ವಿಯಾಗಿ ಮಿಂಚುತ್ತಿದ್ದು, ಮನೆ ಮನೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಲಾಗಿದೆ. ಶ್ರೀ ಗಣೇಶನ ಪ್ರತಿಮೆಗೆ ಹೂವು–ಪತ್ರೆಗಳಿಂದ ಅಲಂಕಾರ ಮಾಡಿ, ಬೆಳಕುಗಳಿಂದ ಮೆರಗು ನೀಡಲಾಗಿದೆ. ಸ್ವಾಮಿಯ ದರ್ಶನಕ್ಕಾಗಿ ಸ್ಥಳೀಯರಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಭಕ್ತರು ಬಂದು ಸೇರಿದ್ದಾರೆ.
ಪ್ರತಿ ವರ್ಷ ಸಾಂಪ್ರದಾಯಿಕವಾಗಿ ನಡೆಯುವ ಈ ಉತ್ಸವವು ರಿಪ್ಪನ್‌ಪೇಟೆಯ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿದೆ. ಭಕ್ತರು ಹರ್ಷೋದ್ಗಾರಗಳೊಂದಿಗೆ “ಗಣಪತಿ ಬಪ್ಪಾ ಮೋರಿಯಾ” ಘೋಷಣೆಗಳನ್ನು ಮೊಳಗಿಸುತ್ತಾ ಉತ್ಸವದ ಸಂಭ್ರಮವನ್ನು ಹೆಚ್ಚಿಸುತ್ತಿದ್ದಾರೆ. ಮಹಿಳೆಯರು ಬಣ್ಣ ಬಣ್ಣದ ವಸ್ತ್ರಗಳಲ್ಲಿ, ಮಕ್ಕಳು ಸಾಂಪ್ರದಾಯಿಕ ವೇಷಭೂಷಣಗಳಲ್ಲಿ ಭಾಗವಹಿಸಿದ್ದು, ಎಲ್ಲೆಡೆ ಹಬ್ಬದ ಸಂಭ್ರಮದ ಚಿತ್ರಣ ಮೂಡಿದೆ.
ಉತ್ಸವದ ಭದ್ರತೆಯ ದೃಷ್ಟಿಯಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಿಸಿಟಿವಿ, ಡ್ರೋನ್ ಕ್ಯಾಮೆರಾಗಳ ಮೂಲಕ ನಿಗಾವಹಿಸಲಾಗುತ್ತಿದ್ದು, 1 ಡಿವೈಎಸ್ಪಿ, 2 ಸರ್ಕಲ್ ಇನ್ಸ್‌ಪೆಕ್ಟರ್, 7 ಸಬ್ ಇನ್ಸ್‌ಪೆಕ್ಟರ್, 18 ಎಎಸ್‌ಐ, 80 ಪೊಲೀಸ್ ಸಿಬ್ಬಂದಿ, 1 ತುಕಡಿ ಕೆಎಸ್‌ಆರ್‌ಪಿ, 1 ತುಕಡಿ ಡಿಇಆರ್ ಹಾಗೂ 103 ಗೃಹರಕ್ಷಕ ದಳದವರು ನಿಯೋಜಿಸಲ್ಪಟ್ಟಿದ್ದಾರೆ
ರಿಪ್ಪನ್‌ಪೇಟೆಯ ಗಣಪತಿ ಉತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಸಾಮಾಜಿಕ ಬಾಂಧವ್ಯ ಹಾಗೂ ಏಕತೆಯ ಪ್ರತೀಕವಾಗಿಯೂ ಗುರುತಿಸಿಕೊಂಡಿದ್ದು, ಇಂದು ನಡೆಯುವ ರಾಜಬೀದಿ ಉತ್ಸವದೊಂದಿಗೆ ಈ ವೈಭವ ಮತ್ತಷ್ಟು ನೆನಪಾಗುವಂತಾಗಲಿದೆ.
ಅನಾರೋಗ್ಯ ಹಿನ್ನಲೆ ಶಾಸಕ ಬೇಳೂರು ಗೈರು – ಆಪ್ತ ಕಾರ್ಯದರ್ಶಿಯಿಂದ ವಿಶೇಷ ಪೂಜೆ

ರಿಪ್ಪನ್‌ಪೇಟೆ:– ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸೇವಾ ಸಮಿತಿಯ 58ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ಉತ್ಸವದಲ್ಲಿ ಶಾಸಕರ ಪರವಾಗಿ ವಿಶೇಷ ಪೂಜೆ ನೆರವೇರಿತು. ಶಾಸಕ ಬೇಳೂರು ಗೋಪಾಲಕೃಷ್ಣ ಅನಾರೋಗ್ಯದ ಕಾರಣ ಸ್ವತಃ ಆಗಮಿಸಲು ಸಾಧ್ಯವಾಗದೇ, ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರಿಂದ ಈ ಪೂಜೆ ನೆರವೇರಿಸಲಾಯಿತು.
ಗಣಪತಿ ಸ್ವಾಮಿಯ ಚರಣಗಳಲ್ಲಿ ಶಾಸಕರ ಪರವಾಗಿ ನಮನ ಸಲ್ಲಿಸಿ, ಕ್ಷೇತ್ರದ ಒಳಿತಿಗಾಗಿ ಹಾಗೂ ಜನರ ಸುಖ–ಶಾಂತಿ, ಸಮೃದ್ಧಿ, ಅಭಿವೃದ್ಧಿ ಹಾರೈಸುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಭಕ್ತರ ನಡುವೆ ಶಾಸಕರ ಪರವಾಗಿ ಹಾಜರಾತಿ ನೀಡಿದ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರಿಗೆ ಗಣಪತಿ ಸಮಿತಿಯವರು ಅಭಿನಂದಿಸಿ ಸನ್ಮಾನಿಸಿದರು.