RIPPONPETE | ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್
ರಿಪ್ಪನ್ ಪೇಟೆ ಪಟ್ಟಣದಲ್ಲಿ ಬರುವ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಪಿಎಸ್‌ಐ ರಾಜುರೆಡ್ಡಿ ನೇತೃತ್ವದಲ್ಲಿ ಪ್ರಮುಖ ರಸ್ತೆಗಳಲ್ಲಿ ಭದ್ರತಾ ದೃಷ್ಟಿಯಿಂದ ರೂಟ್ ಮಾರ್ಚ್ ನಡೆಯಿತು.
ಮೆರವಣಿಗೆಗಳ ಸಮಯದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸದಂತೆ ಮುಂಗಡ ಕ್ರಮವಾಗಿ ಗಣಪತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಮೆರವಣಿಗೆ ಸಾಗುವ ಮಾರ್ಗಗಳ ಪರಿಶೀಲನೆ ನಡೆಯಿತು. ವಿಶೇಷವಾಗಿ ಪಟ್ಟಣದ ವಿನಾಯಕ ಸರ್ಕಲ್ ಮತ್ತು ಜುಮ್ಮಾ ಮಸೀದಿ ಭಾಗದಲ್ಲಿ ಹೆಚ್ಚಿನ ಗಮನ ಹರಿಸಲಾಗಿದ್ದು, ಸ್ಥಳದಲ್ಲಿರುವ ಪೊಲೀಸ್ ಸಿಬ್ಬಂದಿಗೆ ನಿರ್ದಿಷ್ಟ ಸಲಹೆಗಳು ಹಾಗೂ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಲಾಯಿತು.
ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ, ಸಂಚಾರ ನಿಯಂತ್ರಣ, ಜನಸಂದಣಿ ನಿರ್ವಹಣೆ ಸೇರಿದಂತೆ ಇತರೆ ಭದ್ರತಾ ಅಂಶಗಳ ಪರಿಶೀಲನೆ ಕೂಡ ನಡೆದಿದೆ. ಯಾವುದೇ ಸಮಸ್ಯೆಗಳಿಲ್ಲದೆ ಹಬ್ಬಗಳು ಸಾಂಪ್ರದಾಯಿಕ ಹಾಗೂ ಶಾಂತಿಯುತವಾಗಿ ನೆರವೇರಲು ಕ್ರಮ ಕೈಗೊಳ್ಳಲಾಗಿದೆ.
ಈ ಸಂದರ್ಭ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.