Headlines

ಗಣಪತಿ ಹಬ್ಬ : ಶಾಂತಿ – ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜು , 80 ಕಿಡಿಗೇಡಿಗಳ ಗಡಿಪಾರು | ಎಸ್ಪಿ ಮಿಥುನ್ ಕುಮಾರ್  ಮಾಹಿತಿ

ಗಣಪತಿ ಹಬ್ಬ : ಶಾಂತಿ – ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜು , 80 ಕಿಡಿಗೇಡಿಗಳ ಗಡಿಪಾರು | ಎಸ್ಪಿ ಮಿಥುನ್ ಕುಮಾರ್  ಮಾಹಿತಿ

ಶಿವಮೊಗ್ಗ: ಗೌರಿ ಮತ್ತು ಗಣೇಶ ಹಬ್ಬಗಳ ಹಿನ್ನಲೆಯಲ್ಲಿ ಗಣಪತಿ ಸಮಿತಿಗಳೊಂದಿಗೆ ಶಾಂತಿ ಸಭೆಗಳಿಗೆ ಚಾಲನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರು ಗಣಪತಿ ಸಮಿತಿಗಳಿಗೆ ಶಾಂತಿಯುತ ಮತ್ತು ವೈಭವದ ಹಬ್ಬ ಆಚರಣೆಗೆ ಸಲಹೆ ಸೂಚನೆಗಳನ್ನು ನೀಡಿದರು.

ಕೋಟೆ ರಸ್ತೆಯ ಹಿಂದೂ ಮಹಾಸಭಾ ಸಮಿತಿಯೊಂದಿಗೆ ಶಾಂತಿಸಭೆ ಪ್ರಾರಂಭಿಸಿದ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರು ಗಣಪತಿ ಪ್ರತಿಷ್ಠಾಪನಾ ಸಮಿತಿ ಮತ್ತು ಅಲಂಕಾರ ಸಮಿತಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ಪ್ರತಿ ವರ್ಷವೂ ಸಹ ಸ್ಥಳ ವಿಶೇಷತೆ ಇರುವ ಈ ಪುಣ್ಯ ಸ್ಥಳದಿಂದಲೇ ಗಣಪತಿ ಪ್ರತಿಷ್ಠಾಪನೆಗೆ ಸಂಬಂಧಪಟ್ಟಂತಹ ಸಭೆಗಳನ್ನು ನಡೆಸಲಾಗುತ್ತಿದ್ದು, ಅದೇ ರೀತಿ ಈ ಬಾರಿಯೂ ಸಹಾ ಪುಣ್ಯ ಕ್ಷೇತ್ರವಾದ ಕೋಟೆ ಭೀಮೇಶ್ವರ ದೇವಸ್ಥಾನ ದ ಈ ಸ್ಥಳದಿಂದಲೇ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಡೆಸಲಾಗುವ ಶಾಂತಿ ಸಭೆಯನ್ನು ಪ್ರಾರಂಭಿಸುತ್ತಿದ್ದೇವೆ.

ಈ ಹಿಂದಿನ ವರ್ಷ ಜಿಲ್ಲೆಯಲ್ಲಿ ಒಟ್ಟು ಮೂರು ವರೆ ಸಾವಿರಕ್ಕೂ ಹೆಚ್ಚು ಗಣಪತಿಗಳ ಪ್ರತಿಷ್ಠಾಪನೆಯಾಗಿದ್ದು, ಈ ವರ್ಷವೂ ಸಹಾ ಮೂರು ಸಾವಿರದ ಆರು ನೂರು ಗಣಪತಿಗಳ ಪ್ರತಿಷ್ಠಾಪನೆಯಾಗುವ ನಿರೀಕ್ಷೆ ಇದೆ. ಗಣಪತಿ ಪ್ರತಿಷ್ಠಾಪನೆಯಿಂದ ಗಣಪ ವಿಸರ್ಜನೆಯಾಗುವ ವರೆಗೂ ಸಹಾ ಒಟ್ಟು ಒಂದುವರೆ ತಿಂಗಳುಗಳ ಕಾಲ ಪೊಲೀಸ್ ಇಲಾಖೆಯು ಸಾರ್ವಜನಿಕರ ಹಿತ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ, ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿರುತ್ತದೆ. ಸಾರ್ವಜನಿಕರಿಗಾಗಿ ನಾವು ಯಾವುದೇ ಹಿಂಜರಿಕೆ ಇಲ್ಲದೇ ಕರ್ತವ್ಯ ನಿರ್ವಹಿಸಲು ಸದಾ ಕಾಲ ಸಜ್ಜಾಗಿರುತ್ತೇವೆ ಎಂದು ತಿಳಿಸಿದರು.

2500 ಸಿಬ್ಬಂದಿಗಳು

ಹಬ್ಬದಲ್ಲಿ ಜನರ ರಕ್ಷಣೆಗಾಗಿಯೆ ಒಟ್ಟು ೨೫೦೦ ಕ್ಕೂ ಹೆಚ್ಚು ಜನ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಹಗಲಿರುಳು ಶ್ರಮಿಸುತ್ತೇವೆ. ಇದರೊಂದಿಗೆ 2500 ಯಿಂದ 3000 ದಷ್ಟು ಜನ ಹೊರ ಜಿಲ್ಲೆಯಿಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾಗಲಿದ್ದಾರೆ. ನಗರದಲ್ಲಿ 1000 ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಆದ್ದರಿಂದ ನೀವುಗಳು ಸಹಾ ಹೆಚ್ಚಿನ ಜನರು ಸೇರುವ ಸ್ಥಳಗಳಲ್ಲಿ, ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ. ಇದರಿಂದ ಹಬ್ಬದ ಆಚರಣೆ ಮತ್ತು ಪೂಜೆಗಳಲ್ಲಿ ಭಾಗವಹಿಸುವ ಸಾರ್ವಜನಿಕರ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯು ಸಾಧ್ಯ. ಹಬ್ಬದ ಆಚರಣೆ, ಅಲಂಕಾರ ಹಾಗೂ ಇತರೆ ಯಾವುದೇ ವಿಚಾರಗಳ ಕುರಿತು ಯಾರೊಂದಿಗಾದರೂ ಸಮಸ್ಯೆಗಳು ಬಂದಾಗ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ, ನಾವೆಲ್ಲರೂ ಸೇರಿ ಕಾನೂನಿನ ಚೌಕಟ್ಟಿಗೆ ಒಳಪಟ್ಟು ಸಮಸ್ಯೆಯನ್ನು ಬಗೆಹರಿಸೋಣ ಎಂದರು.

ಸಿಸಿ ಟಿವಿ ಕ್ಯಾಮೆರಗಳು ತುಂಬಾ ಸಹಾಯಕ್ಕೆ ಬರಲಿವೆ. ಎಷ್ಟೋ ಬಾರಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುರುವುದನ್ನು ನೋಡಿಯೇ ಯಾವುದೇ ಕಿಡಿಗೇಡಿತನ / ಕಳ್ಳತನ ಮಾಡಲು ಹಿಂಜರಿಯುತ್ತಾರೆ. ನಒಂದು ವೇಳೆ ಯಾವುದೇ ಘಟನೆಗಳು ಜರುಗಿದರೂ ಸಹಾ ಆರೋಪಿತರನ್ನು ಶೀಘ್ರವಾಗಿ ಪತ್ತೆ ಮಾಡಲು ಸಾಧ್ಯವಿರುತ್ತದೆ. ಹಬ್ಬಕ್ಕೆ ಅಡಚಣೆಯನ್ನುಂಟು ಮಾಡುವಂತಹ ಸಂಭವನೀಯ 80 ಜನ ಕಿಡಿಗೇಡಿ ವ್ಯಕ್ತಿಗಳನ್ನು ಗುರುತಿಸಿ ಪೊಲೀಸ್ ಇಲಾಖೆಯು ಈಗಾಗಲೇ ಅಂತಹವರನ್ನು ಗಡಿಪಾರು ಮಾಡಿ, ಹಲವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿರುತ್ತೇವೆ. ಇನ್ನೂ ಕೆಲವರನ್ನು ಗುರುತಿಸಿದ್ದು ಅವರ ಮೇಲೂ ಸಹಾ ಕ್ರಮ ಕೈಗೊಳ್ಳುತ್ತೇವೆ ಯಾರೋ ಕೆಲವು ಜನ ಕಿಡಿಗೇಡಿ ಮಾಡುವ ಕೃತ್ಯದಿಂದ ಇಡೀ ಸಮಾಜಕ್ಕೆ ಹಾಗೂ ಹಬ್ಬದ ಆಚರಣೆಗೆ ಮತ್ತು ವೈಭವಕ್ಕೆ ತೊಂದರೆಯಾಗಲಿದೆ, ಆದ್ದರಿಂದ ಸಾರ್ವಜನಿಕರ ಹಿತ ರಕ್ಷಣೆಯ ದೃಷ್ಠಿಯಿಂದ ಗಡಿಪಾರು ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಳೆಯ ವರ್ಷದ ಗಣಪತಿ ವಿಸರ್ಜನೆಯ ವಿಡಿಯೋ ಗಳನ್ನು ಗಮನಿಸಿ, ಜನ ಸಮೂಹದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವುದು, ಹೆಣ್ಣು ಮಕ್ಕಳಿಗೆ ಕಿರಿ ಕಿರಿ ಮಾಡುವುದು, ಅವರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಕಿಡಿಗೇಡಿತನ ಮಾಡುವುದು, ಪ್ರಚೋದನಾಕಾರಿಯಾಗಿ ಘೋಷಣೆ ಕೂಗುವುದು, ತಳ್ಳಾಟ ಮಾಡುವುದು ಈ ರೀತಿಯ ಕೃತ್ಯ ಮಾಡುವವರನ್ನು ಗುರುತಿಸಿ, ಅವರುಗಳ ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಿ ಸೂಕ್ತ ಎಚ್ಚರಿಕೆ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಕಾರಿಯಪ್ಪ ಎ ಜಿ., ಎಸ್ ರಮೇಶ್ ಕುಮಾರ್ , ಡಿವೈಎಸ್ಪಿ ಬಾಬು ಆಂಜನಪ್ಪ,, ಕೋಟೆ ಪೊಲೀಸ್ ಇನ್ಸ್ ಪೆಕ್ಟರ್ ಹರೀಶ್ ಪಾಟೀಲ್ ಮತ್ತು ಹಿಂದೂ ಮಹಾ ಸಭಾ ಗಣಪತಿ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Exit mobile version