ಧರ್ಮಸ್ಥಳ ಕ್ಷೇತ್ರ ನಿಂದನೆ ಸಲ್ಲದು ; ಹೊಂಬುಜ ಶ್ರೀಗಳು
ರಿಪ್ಪನ್‌ಪೇಟೆ : ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮೇಲೆ ನಿರಂತರ ದೋಷಾರೋಪಣೆ ಮಾಡುವ ಮೂಲಕ ನಿಂದಿಸಿ ವಿಕೃತ ಸಂತೋಷವನ್ನು ಅನುಭವಿಸುತ್ತಿರುವ ಸಮಾಜ ಘಾತಕ ಶಕ್ತಿಗಳ ಮೇಲೆ ಸರ್ಕಾರ ಮತ್ತು ನ್ಯಾಯಾಲಯವು ಕಠಿಣ ಕ್ರಮ ಜರುಗಿಸಬೇಕೆಂದು ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಶ್ರೀಗಳು, ಕೋಟ್ಯಂತರ ಜನರ ಶ್ರದ್ಧಾ ಕೇಂದ್ರದ ಮೇಲೆ ಮಾನಹಾನಿ ಮಾಡುವ ಕಾಯಕವನ್ನು ಕೆಲವರು ಇತ್ತೀಚೆಗೆ ರೂಢಿಸಿಕೊಂಡಿರುತ್ತಾರೆ.
ಸರ್ಕಾರವೇ ಈಗಾಗಲೇ ಅನೇಕ ಬಾರಿ ತನ್ನ ತನಿಖಾ ಸಂಸ್ಥೆಗಳ ಮೂಲಕ ವಿಚಾರಣೆ ಮಾಡಿದೆ. ಮತ್ತೆ ಈಗ ಅನಾಮಿಕನ ಮಾತಿಗೆ ಬೆಲೆಕೊಟ್ಟು ಎಸ್.ಐ.ಟಿ. ರಚನೆ ಮಾಡಿ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬರುವ ಮುಂಚೆಯೇ ಸ್ವಯಂ ಘೋಷಣೆ ಮಾಡುವ ಮೂಲಕ ಕೆಲವು ಸಾಮಾಜಿಕ ಜಾಲ ತಾಣಗಳ ಸಂಘಟಕರು, ಇನ್ನಿತರರು ಹತಾಶರಾಗಿ ಧರ್ಮ ಮತ್ತು ಧರ್ಮಾತ್ಮರ ನಿಂದೆ ಮಾಡುತ್ತಾ ಭಕ್ತ ಜನರ ಮನಸ್ಸಿಗೆ ಘಾಸಿ ಮಾಡಿ ಅಸಹಜ ಸಂತೋಷಪಡುತ್ತಿದ್ದಾರೆ.
ನಾವುಗಳು ತಪ್ಪಿತಸ್ಥರ ಪರವಾಗಿ ಇಲ್ಲ. ಕಾನೂನಿನ ಮತ್ತು ಸತ್ಯವಂತರ, ಧರ್ಮಾತ್ಮರ ಪರವಾಗಿ ಸಜ್ಜನರ ಜೊತೆಯಿದ್ದೇವೆ. ‘ಸತ್ಯಮೇವ ಜಯತೆ’, ‘ಧರ್ಮೋ ರಕ್ಷತಿ ರಕ್ಷಿತಃ’ ಸೂತ್ರಗಳನ್ನು ನಂಬಿರುವ ಭಕ್ತ ಜನರಿಗೆ ಸ್ವಧರ್ಮ, ಸ್ವದೇಶ ರಕ್ಷಣೆ ಮಾಡುವುದು ಗೊತ್ತಿದೆ. ಕಾನೂನಿಗೆ ತಲೆಬಾಗಿ ತಾಳ್ಮೆಯಿಂದಿರುವ ಜನರ ಪರೀಕ್ಷೆ ಸಲ್ಲದು.
ಸರ್ಕಾರ ಮತ್ತು ಕಾನೂನು ಇಲಾಖೆಯವರು ಪರಸ್ಪರ ನಿಂದನೆ ಮತ್ತು ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿರುವ ಜನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.



