Headlines

ಭಾರಿ ಮಳೆ – ಹೊಸನಗರ ತಾಲೂಕ್ ಸೇರಿದಂತೆ ಜಿಲ್ಲೆಯ ಐದು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಶಿವಮೊಗ್ಗ ಜಿಲ್ಲಾದ್ಯಂತ ಭಾರಿ ಪ್ರಮಾಣದ ಮಳೆ(Rain) ಸುರಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲೆಯ 5 ತಾಲೂಕಿನ ಶಾಲಾ, ಕಾಲೇಜುಗಳಿಗೆ ನಾಳೆ (ಜು.26) ರಜೆ ಘೋಷಿಸಿ ಆಯಾ ತಾಲೂಕಿನ ತಹಸೀಲ್ದಾರ್ ಆದೇಶಿಸಿದ್ದಾರೆ.

ಹೊಸನಗರ ತಾಲೂಕಿಗೆ ರಜೆ –

ಹೊಸನಗರ ತಾಲೂಕಿನಾದ್ಯಂತ ಅತಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ನಾಳೆ ಕೂಡ ಹೆಚ್ಚಿನ ಮಳೆಯಾಗುವ ಸಂಭವನೀಯತೆ ಹೆಚ್ಚಿರುವುದರಿಂದ ಜು.26 ರಂದು ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾತ್ರ ಅನ್ವಯಿಸಿ ರಜೆಯನ್ನು ಘೋಷಿಸಲಾಗಿದೆ. ಮುಂದಿನ ರಜಾ ದಿನಗಳಲ್ಲಿ ಶಾಲೆಗಳನ್ನು ನಡೆಸಿ ಪಾಠ ಪ್ರವಚನಗಳನ್ನು ಸರಿದೂಗಿಸಲು ತಹಸೀಲ್ದಾರ್ ರಶ್ಮಿ ಹಾಲೇಶ್ ಆದೇಶಿಸಿದ್ದಾರೆ.

ಸಾಗರ ತಾಲೂಕು ರಜೆ :
ಸಾಗರ ತಾಲೂಕಿನಾದ್ಯಂತ ಅತಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜು. 26ರ ಶನಿವಾರ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರಶೇಖರ್ ನಾಯಕ್ ಆದೇಶದಲ್ಲಿ ತಿಳಿಸಿದ್ದಾರೆ.

ಶಿಕಾರಿಪುರ ರಜೆ ಘೋಷಣೆ :

ಶಿಕಾರಿಪುರ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ, ಪಿಯು ಕಾಲೇಜ್ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ನಿರಂತರ ಮಳೆ ಇರುವುದರಿಂದ ಮಕ್ಕಳ ಸುರಕ್ಷತೆ ಮತ್ತು ಆರೋಗ್ಯ ದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ಆದೇಶಿಸಿದ್ದಾರೆ.

ಶಿವಮೊಗ್ಗ ತಾಲೂಕು ರಜೆ :

ಶಿವಮೊಗ್ಗ ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಾಗೂ ಶೀತ ವಾತಾವರಣ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಶಿವಮೊಗ್ಗ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಜು. 26ರ ಶನಿವಾರದಂದು ರಜೆ ಘೋಷಿಸಿದೆ. ಈ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನಗಳಲ್ಲಿ ಸರಿ ಹೊಂದಿಸಿಕೊಳ್ಳಲು ಸಂಬಂಧಿತ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಲಾಗಿದೆ ಎಂದು ತಹಸೀಲ್ದಾರ್ ವಿ.ಎಸ್. ರಾಜೀವ್ ಆದೇಶದಲ್ಲಿ ತಿಳಿಸಿದ್ದಾರೆ.

ಭದ್ರಾವತಿ ರಜಾ ಘೋಷಣೆ ;

ಭದ್ರಾವತಿ ತಾಲ್ಲೂಕಿನಾದ್ಯಂತ ವ್ಯಾಪಾಕವಾಗಿ ಸುರಿಯುತ್ತಿರುವ ಬಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಭದ್ರಾವತಿ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ & ಪ್ರೌಢ ಶಾಲೆಗಳಿಗೆ ಮತ್ತು ಪಿಯು ಕಾಲೇಜುಗಳಿಗೆ ಜು.26ರ ಶನಿವಾರ ರಜೆ ಘೋಷಿಸಿದೆ. ಈ ರಜಾ ಅವಧಿಯ ಶೈಕ್ಷಣಿಕ ಪಠ್ಯಗಳನ್ನು ಮುಂದಿನ ರಜೆಯ ದಿನದಲ್ಲಿ ಸರಿಹೊಂದಿಸಿಕೊಳ್ಳಲು ಸಂಬಂಧಿತ ಶಾಲಾ ಮುಖ್ಯಸ್ಥರುಗಳಿಗೆ ತಿಳಿಸಲಾಗಿದೆ ಎಂದು ತಹಶೀಲ್ದಾರ್ ಆದೇಶದಲ್ಲಿ ತಿಳಿಸಿದ್ದಾರೆ.

Exit mobile version