ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ – ಮತ್ತಿಮನೆ ಸುಬ್ರಹ್ಮಣ್ಯ
ರಿಪ್ಪನ್‌ಪೇಟೆ: “ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯವು ರಾಜಕೀಯದ ಆಟಕ್ಕೆ ಬಲಿಯಾಗಬಾರದು. ಇದು ಸಾವಿರಾರು ಭಕ್ತರ ನಂಬಿಕೆಗೆ ತಾಯಿಯಾಗಿರುವ ದೇಗುಲ. ಇಂತಹ ಪವಿತ್ರ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ಜನರ ಭಾವನೆಗಳನ್ನು ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ,” ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಆರೋಪಿಸಿದ್ದಾರೆ.
ಬುಧವಾರ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಶಾಸಕರಾಗಿ ಹರತಾಳು ಹಾಲಪ್ಪನವರ ಅಧಿಕಾರಾವಧಿಯಲ್ಲಿ ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿಗೆ ಸರಕಾರದಿಂದ ನೀರಾವರಿ ನಿಗಮದ ಮೂಲಕ ₹1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಅನುದಾನವನ್ನು ನಿರ್ಮಿತಿ ಕೇಂದ್ರದ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು.
ಆದರೆ ಈಗಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಈ ಅನುದಾನವನ್ನು ತಡೆಯುವ ನಿಟ್ಟಿನಲ್ಲಿ ನಿರ್ಮಿತಿ ಕೇಂದ್ರ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಸರ್ಕಾರದ ಅನುದಾನವನ್ನೇ ವಾಪಸ್ ಕಳುಹಿಸಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದರು.
“ಶಾಸಕರಾಗಿ ಗೋಪಾಲಕೃಷ್ಣ ಅವರು ಎರಡೂವರೆ ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು ದೇವಾಲಯ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬುದನ್ನು ಜನರ ಮುಂದೆ ಬಹಿರಂಗಪಡಿಸಲು ಸಿದ್ಧರಾಗಲಿ. ನಾವು ಚರ್ಚೆಗೆ ಸಿದ್ಧವಾಗಿದ್ದೇವೆ,” ಎಂದು ಅವರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಆರ್.ಟಿ. ಗೋಪಾಲ ಮಾತನಾಡಿ ಹಿಂದಿನ ವ್ಯವಸ್ಥಾಪನಾ ಸಮಿತಿಯಲ್ಲಿ”ಇಪ್ಪತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಕಲಗೋಡ್ ರತ್ನಾಕರ್ ಅವರು ಅಧಿಕಾರ ಮುಗಿದ ಬಳಿಕವೂ ಹೊಸ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಿಲ್ಲ. ಇಷ್ಟಲ್ಲದೇ ಸಾರ್ವಜನಿಕರಿಂದ ಸಂಗ್ರಹಿಸಿದ ಲಕ್ಷಾಂತರ ರೂಪಾಯಿ ವಂತಿಕೆ ಹಣವನ್ನು ಮೂರು ವರ್ಷಗಳಿಂದ ತಮ್ಮ ಸ್ವಂತ ಹಣದಂತೆ ಇಟ್ಟುಕೊಂಡಿರುವುದು ನ್ಯಾಯವೇ?” ಎಂದು ಪ್ರಶ್ನಿಸಿದರು.
ಅವರು ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಎಲ್ಲಿ ಕೈ ತಪ್ಪುತದೆಯೋ ಎಂಬ ಭಯದಲ್ಲಿ ಶಾಸಕರ ಅಣತಿಯಂತೆ ಈ ರೀತಿ ಹೇಳಿಕೆ ನೀಡುತ್ತಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್. ಸತೀಶ್, ಪ್ರಧಾನ ಕಾರ್ಯದರ್ಶಿ ನಾಗಾರ್ಜುನಸ್ವಾಮಿ, ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಎ.ಟಿ. ನಾಗರತ್ನಮ್ಮ,ಪ್ರಮುಖರಾದ ಆನಂದ್ ಮೆಣಸೆ ,ಸುಧೀಂದ್ರ ಪೂಜಾರಿ, ಸುಂದರೇಶ್ ಕೆರೆಹಳ್ಳಿ ,ಮಂಜುಳಾ ಕೆ ರಾವ್ , ಪದ್ಮಾ ಸುರೇಶ್ , ನಾಗರತ್ನ ದೇವರಾಜ್ , ಅಶ್ವಿನಿ ರವಿಶಂಕರ್ , ಮುರುಳಿ ಕೆರೆಹಳ್ಳಿ ,ಮಲ್ಲಿಕಾರ್ಜುನ್ , ಲೀಲಾ ಶಂಕರ್ , ದೀಪಾ ಸುಧೀರ್ ,ಶಾಜಿ ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.