ಜಾಗ ಬಿಟ್ಟು ರಾಜ್ಯಕ್ಕೆ ಬೆಳಕು ಕೊಟ್ಟ ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ಕೊಡಿ: ಸಿಎಂಗೆ ಸಚಿವ ಮಧು ಬಂಗಾರಪ್ಪ ಮನವಿ
ಶರಾವತಿ ಸಂತ್ರಸ್ತರಿಗೆ ಭೂ ಹಕ್ಕು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಸಮುದಾಯದ ಪರವಾಗಿ ಕೈ ಮುಗಿದು ಮನವಿ ಮಾಡಿದರು.
ಪ್ರದೇಶ ಆರ್ಯ ಈಡಿಗ ಸಂಘ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಈಡಿಗ, ಬಿಲ್ಲವ ಮತ್ತು ನಾಮದಾರಿ ಸೇರಿ 26 ಪಂಗಡಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯ ಶರಾವತಿ ಸಂತ್ರಸ್ತರು, ಇಡೀ ರಾಜ್ಯಕ್ಕಾಗಿ ಜಮೀನು ಕೊಟ್ಟಿದ್ದಾರೆ. ತಮ್ಮ ಜಮೀನು ತ್ಯಾಗ ಮಾಡಿ, ಇಂದಿಗೂ ಕತ್ತಲೆಯಲ್ಲಿ ಜೀವನ ಮಾಡುತ್ತಿದ್ದಾರೆ. ಅವರಿಗೆ ಭೂಮಿ ಕೊಡಿಸುವ ನಿಟ್ಟಿನಲ್ಲಿ
ಕಾಗೋಡು ತಿಮ್ಮಪ್ಪ ಅವರು ಮಾಡುತ್ತಿರುವ ಹೋರಾಟ ಎಂದಿಗೂ ಸ್ಫೂರ್ತಿ ತುಂಬಿಸಿದೆ. ಅವರ ಹೋರಾಟದ ಹಾದಿ ನಮ್ಮೆಲ್ಲರನ್ನೂ ಹುರಿದುಂಬಿಸುತ್ತದೆ ಎಂದರು.
ನಾವು ಹೆಂಡ ಮಾರಿಕೊಂಡು ಈ ಮಟ್ಟಕ್ಕೆ ಬಂದಿರೋರು. ಹೆಂಡ ನಿಷೇಧ ಮಾಡುವ ಮೂಲಕ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿದೆ. ನಮಗೆ ಶೈಕ್ಷಣಿಕ ಹಾಗೂ ಸಾಮಾಜಿಕ ರಕ್ಷಣೆ ಕೊಡುವ ಕೆಲಸ ಆಗುತ್ತದೆ ಎಂದು ನಂಬಿದ್ದೇನೆ. ನಾನು ಸಚಿವನಾಗಿ ಇಲ್ಲಿಗೆ ಬಂದಿಲ್ಲ. ನಮ್ಮ ಸಮಾಜದ ವ್ಯಕ್ತಿಯಾಗಿ ಬಂದು ಮಾತನಾಡುತ್ತಿದ್ದೇನೆ ಎಂದರು.
ನಮ್ಮನ್ನು ಒಂದು ರೀತಿ ಕಾಡು ಮನುಷ್ಯರು ಅಂತ ಹೇಳಬಹುದು. ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಚುನಾವಣೆಗೆ ಮುನ್ನ ನೀವು ಭರವಸೆ ನೀಡಿದ್ದೀರಿ. ಇದರ ಸಾಕಾರಕ್ಕೆ
ಕೇಂದ್ರ ಸರ್ಕಾರದ ಬೆಂಬಲ ಸಹ ಬೇಕು. ಕೇಂದ್ರ ಸರ್ಕಾರವನ್ನು ಮನವೊಲಿಸುವ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ. ನನ್ನ ತಂದೆ ಬಂಗಾರಪ್ಪ ಸಿಎಂ ಆದಾಗ ನನಗೆ ನೋಡಲು ಆಗಲಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿದಾಗ, ನಾನು ನಮ್ಮ ತಂದೆ ಬಂಗಾರಪ್ಪರನ್ನು ನೋಡಿದ ಹಾಗೇ ಆಗುತ್ತದೆ. ಸಿದ್ದರಾಮಯ್ಯ ಅವರನ್ನು ನಮ್ಮ ತಂದೆಯ ಸ್ಥಾನದಲ್ಲಿ ನೋಡತ್ತೇನೆ. ಅವರಿಗೆ ನಾನು ಕೈ ಮುಗಿದು ಕೇಳತ್ತೇನೆ. ನಾವು. ಬೀದಿಗೆ ಬಂದಿದ್ದೇವೆ. ಸರ್ಕಾರಕ್ಕೆ ಹಣಕಾಸು ಸಮಸ್ಯೆ ಇರುತ್ತದೆ. ಆದರೂ ನಮ್ಮ ಸಮುದಾಯಕ್ಕೆ 500 ಕೋಟಿ ಮೀಸಲಿಡಿ ಎಂದು ಬೇಡಿಕೆ ಇಟ್ಟರು.
ನಮ್ಮ ಸಮುದಾಯದ ನಾಯಕರು ಮುಖ್ಯಮಂತ್ರಿಗಳ ಮುಂದೆ ವಿವಿಧ ಬೇಡಿಕೆಗಳನ್ನು ನಿಮ್ಮ ಮುಂದಿಟ್ಟಿದ್ದಾರೆ. ಜಾಗ ಬಿಟ್ಟು ಕೊಟ್ಟು ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಶರಾವತಿ ಭಾಗದ ಸಂತ್ರಸ್ತರ ಸಮ್ಯಸೆ ಹೆಚ್ಚಿದೆ. ಅವರಿಗೆ ಹಕ್ಕು ಪತ್ರಗಳನ್ನು ನೀಡಿದ ಭರವಸೆ, ಭರವಸೆ ಆಗಿಯೇ ಉಳಿಯಬಾರದು. ರಾಜ್ಯಕ್ಕೆ ಹತ್ತಾರು ಭಾಗ್ಯ ಕೊಟ್ಟ ನೀವು, ನಮಗೆ ಭೂ ಹಕ್ಕನ್ನ ಕೊಡಿ ಎಂದರು.