Headlines

ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ!|Shrikanth

ಶಿವಮೊಗ್ಗ : ಆಯನೂರು ಮಂಜುನಾಥ್, ಮಧು ಬಂಗಾರಪ್ಪ, ಆರ್. ಎಂ. ಮಂಜುನಾಥ ಗೌಡ ಬಳಿಕ ಶಿವಮೊಗ್ಗದ ಮತ್ತೊಬ್ಬ ಜೆಡಿಎಸ್ ನಾಯಕ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಮಧು ಬಂಗಾರಪ್ಪ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ನಿಂದ ಸೊರಬದಲ್ಲಿ ಗೆದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.

ಬುಧವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತುಮಕೂರು ಮಾಜಿ ಶಾಸಕ‌ ಎಸ್. ಶಫಿ ಅಹ್ಮದ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಪಕ್ಷ ಸೇರಿದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಎಂ. ಶ್ರೀಕಾಂತ್ ಸೇರಿದಂತೆ ಇತರ ನಾಯಕರನ್ನು ಬರಮಾಡಿಕೊಂಡರು. ಇದೊಂದು ವಿಶೇಷವಾದ ಸಂದರ್ಭ. ವಿಜಯದಶಮಿಯಾಗಿ ಮೊದಲನೇ ದಿನವಾದ ಇಂದು ಜನತಾದಳದಿಂದ ಸಾವಿರಾರು ಕಾರ್ಯಕರ್ತರು ಹಾಗೂ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಡಿ. ಕೆ. ಶಿವಕುಮಾರ್ ಮಾತನಾಡಿ, ಎಂ. ಶ್ರೀಕಾಂತ್ ನನ್ನ ಒಳ್ಳೆಯ ಗೆಳೆಯ ಹಾಗೂ ಒಳ್ಳೆಯ ಸಂಘಟನಾಗಾರ. ನಾಯಕರನ್ನು ಸೃಷ್ಟಿ ಮಾಡುವಂತಹ ಶಕ್ತಿ ಅವರಲ್ಲಿದೆ. ಕಾಂಗ್ರೆಸ್ ಪಕ್ಷಕ್ಕೆ ಅವರನ್ನು ಆತ್ಮೀಯಾಗಿ ಸ್ವಾಗತಿಸುತ್ತೇನೆ. ಅವರಂತಹ ನಾಯಕ ನಮ್ಮ ಪಕ್ಷದಲ್ಲಿರಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದ್ದಾರೆ.

ಎಂ. ಶ್ರೀಕಾಂತ್ ಕಾಂಗ್ರೆಸ್‌ಗೆ; ಜೆಡಿಎಸ್ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. 2013ರ ಚುನಾವಣೆಯಲ್ಲಿ ಅವರು ಶಿವಮೊಗ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 21,638 ಮತಗಳನ್ನು ಪಡೆದು ಸೋಲು ಕಂಡಿದ್ದರು.

2008ರ ಚುನಾವಣೆಯಲ್ಲಿ ಅವರು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 19,232 ಮತಗಳನ್ನು ಪಡೆದಿದ್ದರು. 2018 ಮತ್ತು 2023ರ ಚುನಾವಣೆಯಲ್ಲಿ ಎಂ. ಶ್ರೀಕಾಂತ್ ಸ್ಪರ್ಧಿಸಿರಲಿಲ್ಲ. ಆರ್. ಎಂ. ಮಂಜುನಾಥ ಗೌಡರು ಅಧ್ಯಕ್ಷರಾಗುವ ಮೊದಲು ಎಂ. ಶ್ರೀಕಾಂತ್ ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದರು. ಮಂಜುನಾಥ ಗೌಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಬಳಿಕ ಪುನಃ ಶ್ರೀಕಾಂತ್ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು.

ಆಗಸ್ಟ್ ತಿಂಗಳಿನಲ್ಲಿ ಶಿವಮೊಗ್ಗದ ಜೆಡಿಎಸ್ ನಾಯಕ ಆಯನೂರು ಮಂಜುನಾಥ್ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಮಂಗಳೂರು, ಉಡುಪಿ, ತುಮಕೂರು, ಕೊಡಗು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಒಳಗೊಂಡ ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು.

ಆದರೆ ವಿಧಾನ ಪರಿಷತ್‌ ಅವಧಿ ಇನ್ನೂ ಉಳಿದಿರುವಾಗಲೇ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪರಿಷತ್ ಸದಸ್ಯತ್ವ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಆಯನೂರು ಮಂಜುನಾಥ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದರು.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಆಯನೂರು ಮಂಜುನಾಥರನ್ನು ಶಿವಮೊಗ್ಗ ನಗರದ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಚುನಾವಣೆಯಲ್ಲಿ ಅವರು 8,863 ಮತಗಳನ್ನು ಮಾತ್ರ ಪಡೆದು ಹೀನಾಯ ಸೋಲು ಕಂಡಿದ್ದರು. ಬಳಿಕ ಅವರು ಕಾಂಗ್ರೆಸ್ ಸೇರಿದ್ದರು.

ಆಯನೂರು ಮಂಜುನಾಥ್, ಮಧು ಬಂಗಾರಪ್ಪ, ಆರ್. ಎಂ. ಮಂಜುನಾಥ ಗೌಡ ಬಳಿಕ ಎಂ. ಶ್ರೀಕಾಂತ್ ಈಗ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ನಾಯಕರಾಗಿದ್ದಾರೆ. 2013ರಲ್ಲಿ ಸೊರಬದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾಗಿದ್ದ ಮಧು ಬಂಗಾರಪ್ಪ 2021ರ ಜುಲೈನಲ್ಲಿ ಕಾಂಗ್ರೆಸ್ ಸೇರಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಸೊರಬದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಬಿಜೆಪಿಯ ಅಭ್ಯರ್ಥಿ, ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ 44,262 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಸಹ ಅವರು.

2021ರ ಏಪ್ರಿಲ್‌ನಲ್ಲಿ ಶಿವಮೊಗ್ಗದ ಜೆಡಿಎಸ್ ಜಿಲ್ಲಾಧ್ಯಕ್ಷ ತೀರ್ಥಹಳ್ಳಿಯ ಆರ್. ಎಂ. ಮಂಜುನಾಥ ಗೌಡ ತಮ್ಮ ಬೆಂಬಲಿಗರೊಂದಿಗೆ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ಗೆ ಟಿಕೆಟ್ ನೀಡಿತ್ತು. ಅವರು ಸಹ ಚುನಾವಣೆಯಲ್ಲಿ ಸೋಲು ಕಂಡಿದ್ದರು.

Leave a Reply

Your email address will not be published. Required fields are marked *

Exit mobile version