ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲುಗಳು ನಿಲಗಡೆಯಾಗುತ್ತಿರುವುದು ಸಂತಸದ ವಿಷಯವಾಗಿದ್ದು ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಜನರಿಗೆ ಈ ರೈಲ್ವೆ ನಿಲ್ದಾಣದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.
ರಿಪ್ಪನಪೇಟೆ ಕುವೆಂಪು ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹೊಸನಗರ ತೀರ್ಥಹಳ್ಳಿ ತಾಲ್ಲೂಕಿನ ಪ್ರಯಾಣಿಕರು ಈ ನಿಲ್ದಾಣವನ್ನು ಹೆಚ್ಚಾಗಿ ಬಳಸಿಕೊಳ್ಳುವುದರ ಮೂಲಕ ಈ ನಿಲ್ದಾಣದ ಸದುಪಯೋಗವನ್ನು ಪಡೆದುಕೊಂಡು ಪ್ರಾಯೋಗಿಕ ಅವಧಿಯಿಂದ ಶಾಶ್ವತ ನಿಲ್ದಾಣವನ್ನಾಗಿ ಪರಿವರ್ತಿಸಬೇಕಾಗಿದೆ ಎಂದರು.
ರೈಲು ನಿಲುಗಡೆಯಿಂದ ಹುಂಚ, ಕೋಣಂದೂರು, ಹೊಸನಗರ,ರಿಪ್ಪನ್ ಪೇಟೆ,ನಗರ, ನಿಟ್ಟೂರು, ಮಾಸ್ತಿ ಕಟ್ಟೆ ಇನ್ನು ಮುಂತಾದ ಊರಿನ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ. ಪ್ರವಾಸಿ ತಾಣವಾದ ಕೊಡಚಾದ್ರಿ, ಹೊಂಬುಜ ಜೈನ ಕ್ಷೇತ್ರ, ಕೊಲ್ಲೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ಭಕ್ತಾದಿಗಳಿಗೆ ಅನುಕೂಲಕರವಾಗಲಿದೆ ಎಂದರು.
ರೈಲ್ವೆ ನಿಲುಗಡೆಗೆ ಶ್ರಮವಹಿಸಿದ ಸಂಸದ ಬಿ ವೈ ರಾಘವೇಂದ್ರ, ಹಾಲಿ ಹಾಗೂ ಮಾಜಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಅವರು ತಾಳಗುಪ್ಪ ಬೆಂಗಳೂರು – ಮೈಸೂರು ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳಿಗೆ ಅರಸಾಳುವಿನ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಬೇಕು.ಈ ಹಿನ್ನಲೆಯಲ್ಲಿ ಸಂಸದರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಿದ್ದೇವೆ ಎಂದರು.
ಮಾಲ್ಗುಡಿ ರೈಲ್ವೆ ನಿಲ್ದಾಣದ ಅಗತ್ಯತೆಯ ಬಗ್ಗೆ ಹೊಸನಗರ ತೀರ್ಥಹಳ್ಳಿ ತಾಲ್ಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯ ಜನರಲ್ಲಿ ಜಾಗೃತಿ ಮೂಡಿಸಲು ಎರಡು ತಾಲೂಕಿನ ಗ್ರಾಪಂ ಅಧ್ಯಕ್ಷರ ಒಕ್ಕೂಟದೊಂದಿಗೆ ಚರ್ಚಿಸಿ ರೂಪುರೇಷೆಗಳನ್ನು ಹಾಕಿಕೊಳ್ಳಲಾಗುವುದು ಎಂದರು.
ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ಮಾತನಾಡಿ ಹಲವು ದಿನಗಳ ಹೋರಾಟದ ಹಿನ್ನಲೆಯಲ್ಲಿ ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆ.ಇದಕ್ಕೆ ಶ್ರಮಿಸಿದ ಸಂಸದರು,ಹಾಲಿ ಹಾಗೂಮಾಜಿ ಶಾಸಕರುಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಮಧುಸೂಧನ್, ಗಣಪತಿ, ಪ್ರಕಾಶ್ ಪಾಲೇಕರ್,ಬಾಳೂರು ಗ್ರಾಪಂ ಸದಸ್ಯ ರಾಜು ಹೆಚ್ ಎಸ್ ಕಾಂಗ್ರೆಸ್ ಮುಖಂಡರಾದ ರವೀಂದ್ರ ಕೆರೆಹಳ್ಳಿ,ಜಿ ಆರ್ ಗೋಪಾಲಕೃಷ್ಣ, ಉಲ್ಲಾಸ್, ಫ್ಯಾನ್ಸಿ ರಮೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.