ತಮ್ಮಡಿಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಗಂಗಾನಾಯ್ಕ್ ಅಮಾನತ್ತು|suspend
ತಮ್ಮಡಿಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಗಂಗಾನಾಯ್ಕ್ ಅಮಾನತ್ತು
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಗಂಗನಾಯ್ಕ್ ರವರನ್ನು ಅಮಾನತು ಮಾಡಲಾಗಿದೆ.
ಕರ್ತವ್ಯಲೋಪ, ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ತಮ್ಮಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡ್ತಿ ಮುಖ್ಯಶಿಕ್ಷಕ ಡಿ.ಗಂಗಾನಾಯ್ಕ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಆದೇಶಿಸಿದ್ದಾರೆ.
ಗಂಗಾನಾಯ್ಕ ವಿರುದ್ಧ ಆ.25ರಂದು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಶಾಲಾ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದರು. ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿಲ್ಲ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳಕ್ಕಾಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಜನರ ದೂರನ್ನು ಡಿಡಿಪಿಐ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು.
ಇದೀಗ ಶಿಸ್ತುಕ್ರಮ ಜಾರಿಯಾಗಿದೆ. ಡಿ.ಗಂಗಾನಾಯ್ಕ ನಗದು ಪುಸ್ತಕ, ಅಕ್ಷರ ದಾಸೋಹದ ದಾಖಲೆ, ಶಾಲಾ ವಹಿಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದವು. ಕಾರಣ ಕೇಳಿ ಆ.7ರಂದು ಹೊಸನಗರ ಬಿಇಒ ನೋಟಿಸ್ ನೀಡಿದ್ದರೂ ಸಮರ್ಪಕ ಉತ್ತರ ನೀಡಿರಲಿಲ್ಲ.
ಈ ಶಾಲೆಯಲ್ಲಿ ಒಟ್ಟು 59 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತಿದ್ದು
ಕಳೆದ ಹಲವಾರು ತಿಂಗಳುಗಳಿಂದ ಮುಖ್ಯ ಶಿಕ್ಷಕರಾದ ಗಂಗನಾಯ್ಕ್ ಅನಧಿಕೃತವಾಗಿ ಸತತ ಗೈರು ಹಾಜರಾಗುತಿದ್ದು ಶಾಲೆಯ ಶೈಕ್ಷಣಿಕ ಪ್ರಗತಿ ಕುಠಿತವಾಗುತ್ತಿದೆ ಎಂದು ಪೋಷಕರ ಹಾಗೂ ಗ್ರಾಮಸ್ಥರ ಆರೋಪವಾಗಿತ್ತು.