Headlines

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ|RMM

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ
ತೀರ್ಥಹಳ್ಳಿ : ಶಾಸಕರಾಗಿ ಅಥವಾ ಸಚಿವರಾದ ನಂತರ ಸಂವಿಧಾನದ ವಿಧಿ ವಿಧಾನಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ. ಆದರೆ ಇವರು ಸಂವಿಧಾನದ ವಿರುದ್ಧವಾಗಿ ಮಾತನಾಡಿದ್ದಾರೆ. ಎಲ್ಲವನ್ನು ಗೃಹ ಸಚಿವರಾದ ನಂತರ ಪ್ರಾರಂಭ ಮಾಡಿದ್ದರು. ಗೃಹ ಸಚಿವರಾದ ಸ್ವಲ್ಪ ದಿನದಲ್ಲೇ ಮೈಸೂರಿನ ಮಹಿಳೆಯೊಬ್ಬರ ಬಗ್ಗೆ ಮಾತನಾಡಿದ್ದರು. ಈಗ ರಾಷ್ಟ್ರ ಕಂಡಂತಹ ಎತ್ತರದ ಮನುಷ್ಯನ ಬಗ್ಗೆ  ವೈಯಕ್ತಿಕವಾಗಿ ನಿಂದನೆ ಮಾಡಿದ್ದಾರೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥಗೌಡ ಹರಿಹಾಯ್ದರು.

ಬುಧವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಆರಗ ಜ್ಞಾನೇಂದ್ರ ಅವರು ಈ ಮಟ್ಟಿಗೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ.ವರ್ಣಭೇದವನ್ನು ಮಾಡಿ  ಸಂವಿಧಾನದ ವಿರೋಧಿ ಹೇಳಿಕೆಯನ್ನ ನೀಡಿರುವುದು ಸರಿಯಲ್ಲ ಈ ಮನಸ್ಥಿತಿಗೆ ಏನೆಂದು ಹೇಳಬೇಕು ಗೊತ್ತಾಗುತ್ತಿಲ್ಲ. ಇವರೇನು ಸಣ್ಣ ಹುಡುಗರಲ್ಲ. ಸುಮಾರು 40 ರಿಂದ 50 ವರ್ಷಗಳ ಕಾಲ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವ ಇದ್ದು ಎತ್ತರದ ಸ್ಥಾನವನ್ನು ಕಂಡವರು. ಇದು ತೀರ್ಥಹಳ್ಳಿ ಕ್ಷೇತ್ರದ ಜನರಿಗೆ ಮಾಡಿದ ಅಪಚಾರ ಎಂದರು.

ಆರಗ ಜ್ಞಾನೇಂದ್ರ ಅವರು ನೀಡಿದ ಹೇಳಿಕೆಗೆ ಬಿಜೆಪಿಯವರು ಉತ್ತರ ನೀಡಬೇಕಿದೆ. ಪೊಲೀಸ್ ಇಲಾಖೆಯವರು  ಸುಮೋಟೋ ಕೇಸ್ ದಾಖಲಿಸಿ ಅವರ ಮೇಲೆ ಕಾನೂನು ಮತ್ತು ಸಂವಿಧಾನದ ವಿರೋಧಿ ಹೇಳಿಕೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕು. ಸೋನಿಯಾ ಗಾಂಧಿ,  ರಾಹುಲ್ ಗಾಂಧಿ ಏನಾದರೂ ಮಾತನಾಡಿದರೆ ಪ್ರಕರಣವನ್ನ ದಾಖಲಿಸುತ್ತಾರೆ. ಸದಸ್ಯತ್ವವನ್ನು ಅನರ್ಹ ಮಾಡಿಸುತ್ತಾರೆ. ಕಾಂಗ್ರೆಸ್ ಪಕ್ಷದವರು ಮಾಡಿದರೆ ಮಾತ್ರ ಅಪರಾಧವಾ? ಜ್ಞಾನೇಂದ್ರ ಅವರು ಮಾಡಿದಂತಹ ವರ್ಣ ಭೇಧವನ್ನು ನೋಡಿದರೆ ದಕ್ಷಿಣ ಆಫ್ರಿಕದಲ್ಲಿ ನಡೆದ ಘಟನೆ ನೆನಪಾಗುತ್ತದೆ ಎಂದರು.

ಆರಗ ಜ್ಞಾನೇಂದ್ರ ಅವರು ಇನ್ನು ಗೃಹ ಸಚಿವರಾಗಿದ್ದೇನೆ ಎಂಬ ಅಧಿಕಾರದ ಭ್ರಮೆಯಲ್ಲಿದ್ದಾರಾ?  ಕಸ್ತೂರಿ ರಂಗನ್ ವರದಿ ವಿರುದ್ಧ ಈಗ ಪ್ರತಿಭಟನೆ ನಡೆಸಿದ್ದಾರೆ. ಇಷ್ಟು ವರ್ಷಗಳ ಕಾಲ ಇವರದ್ದೇ ಆದ ಸರ್ಕಾರ ಇತ್ತು. ಆಗ ಯಾವುದೇ ರೀತಿಯಲ್ಲಿ ಪ್ರತಿಭಟನೆ ಮಾಡದೆ ನಮ್ಮ ಸರ್ಕಾರ ಬರುವ ಒಳಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಜ್ಞಾನೇಂದ್ರ ಅವರು ಮಾಡಿರುವುದು ಜಾತಿನಿಂದನೆ ಹಾಗೂ ವರ್ಣ ಭೇದ ನಿಂದನೆ. ಇದೊಂದು ದುರಂತ ಹಾಗಾಗಿ ಆ ಮಾತು ಕ್ಷಮೆ ಕೇಳುವುದರಿಂದ ಅಥವಾ ಮಾತನ್ನ ವಾಪಸ್ ಪಡೆಯುವುದರಿಂದ ಈ ಪ್ರಕರಣ ಮುಚ್ಚಿ ಹೋಗುವುದಿಲ್ಲ. ಆರಗ ಜ್ಞಾನೇಂದ್ರರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಬಿಜೆಪಿಯವರು ಉತ್ತರ ನೀಡಬೇಕು ಎಂದರು.
ಕಸ್ತೂರಿ ರಂಗನ್ ವರದಿ ಜಾರಿ ಮಾಡಲು ಒಪ್ಪಿಕೊಂಡಿದ್ದೆ ಕೇಂದ್ರ ಸರ್ಕಾರ, ಬಿಜೆಪಿಯವರದ್ದೇ ಸರ್ಕಾರ, ಅದರ ವಿರುದ್ಧವಾಗಿ ನಾವು ಹೋರಾಟ ಮಾಡಿದ್ದೇವೆ. ವಾರದ ಹಿಂದೆ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಆದರೆ ಆ ಸಭೆಗೆ ಆರಗ ಜ್ಞಾನೇಂದ್ರ ಹೋಗಿರಲಿಲ್ಲ. ಆದರೆ ಈಗ ಕಸ್ತೂರಿ ರಂಗನ್ ವರದಿಯ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಯಾವಾಗಲೂ ಕಸ್ತೂರಿ ರಂಗನ್ ವರದಿಯ ವಿರುದ್ಧವಾಗಿ ಇರುತ್ತದೆ, ಕೇಂದ್ರ ಸರ್ಕಾರಗಳು ಕಸ್ತೂರಿ ರಂಗನ್ ವರದಿಯ ಪರವಾಗಿದೆ. ನನ್ನ ಮೇಲೆ ಕೇಸ್ ದಾಖಲಿಸಿದರು ಪರವಾಗಿಲ್ಲ ಈ ಮಾತು ಸತ್ಯ ಎಂದರು.

ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದ ರಕ್ತ ಕ್ರಾಂತಿ ವಿಚಾರವಾಗಿ ಮಾತನಾಡಿ ಅವರ ಪಕ್ಷ ಅಧಿಕಾರಕ್ಕೆ ಬಂದಿದ್ದೆ ಆ ರೀತಿಯಿಂದ, ರೈತರಿಗೆ ಅವರ ಸರ್ಕಾರ ಏನು ಮಾಡಿದೆ? ಇವರು ಬಹಳ ಬಡತನದಲ್ಲಿ ಬಂದಿದ್ದಾರಲ್ವಾ?  ಗುಮ್ಮಿ ನೀರು ಕುಡಿದು ಬಂದಿದ್ದೇನೆ ಎಂದು ಹೇಳುವವರು ಮಂತ್ರಿಯಾದ ಮೇಲೆ ಅವರ ಮಾತು ಬದಲಾಗಿದೆ. ಅವರ ರಾಜೀನಾಮೆಯನ್ನು ನಾವು ಕೇಳುವುದಿಲ್ಲ ಬಿಜೆಪಿಯವರೇ ರಾಜೀನಾಮೆ ಕೊಡಿ ಎಂದು ಹೇಳಬೇಕು ಎಂದು ಒತ್ತಾಯಿಸಿದರು

Leave a Reply

Your email address will not be published. Required fields are marked *

Exit mobile version