ಸೂಡೂರು ಸೇತುವೆ ಬಳಿ ರಸ್ತೆ ಮಧ್ಯೆ ಲಾರಿ ಅಪಘಾತ : ಸಂಚಾರ ಅಸ್ತವ್ಯಸ್ತ
ರಿಪ್ಪನ್ ಪೇಟೆ: ಇಲ್ಲಿಗೆ ಸಮೀಪದ ಸೂಡೂರು ಸೇತುವೆ ಸಮೀಪ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಒಂದು ಕಿಲೋಮೀಟರ್ ನಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಮುಂಜಾನೆ ನಡೆದಿದೆ.
ಕುಂದಾಪುರ ಕಡೆಯಿಂದ ಆಗಮಿಸಿದ ಕಲ್ಲಿದ್ದಲು ತುಂಬಿದ ಲಾರಿಯೊಂದು ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದ ಪರಿಣಾಮ ಲಾರಿಯ ಮುಂಭಾಗ ಜಖಂಗೊಂಡಿದ್ದು, ಚಾಲಕ ಹಾಗೂ ನಿರ್ವಾಹಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ದಿಢೀರನೆ ಶಿವಮೊಗ್ಗ ಕಡೆಯಿಂದ ಆಗಮಿಸಿದ ಖಾಸಗಿ ಬಸ್ಸೊಂದು ನಡೆದ ಅಪಘಾತವನ್ನು ಗಮನಿಸದೆ ನುಗ್ಗಿದ ಪರಿಣಾಮ ಇನ್ನೊಂದು ಅಪಘಾತವಾಗುವ ಘಟನೆ ತಪ್ಪಿದೆ. ಹಾಗೂ ಲಾರಿಯನ್ನು ತೆರವುಗೊಳಿಸುವಲ್ಲಿ ಖಾಸಗಿ ಬಸ್ ಅಡ್ಡಿಯುಂಟಾಗಿತ್ತು.
ಸತತ ಐದು ಗಂಟೆಗಳ ಕಾಲ ಸಂಚಾರ ಅರ್ಥವ್ಯಸ್ತಗೊಂಡಿದ್ದು, ತಾತ್ಕಾಲಿಕವಾಗಿ ವಾಹನಗಳು ಅನ್ಯಮಾರ್ಗದಲ್ಲಿ ಸಂಚರಿಸುತ್ತಿದ್ದವು. ಸ್ಥಳಕ್ಕೆ ಆಗಮಿಸಿದ ಆಯನೂರು ಪೊಲೀಸರು ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.



