ಸಿದ್ದರಾಮಯ್ಯ ಮಂಡಿಸಿರುವ ಈ ಬಾರಿಯ ಬಜೆಟ್ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದ್ದು, ಅತಿ ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತು ನಿಡುವಲ್ಲಿ ಎಡವಿದ್ದಾರೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ವಿಶ್ಲೇಷಿಸಿದ್ದಾರೆ.
ಪಟ್ಟದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಯಾವುದೇ ಪ್ರೋತ್ಸಾಹವಿಲ್ಲದ ಪ್ರಗತಿಹೀನ ಬಜೆಟ್ ಆಗಿದ್ದು ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು ವಾಗ್ದಾನ ನೀಡಿದ್ದರೋ ಅದರ ಅನುಷ್ಠಾನಕ್ಕೆ ಕರ್ನಾಟಕದ ಗರಿಷ್ಠ ತೆರಿಗೆ ಹಣವನ್ನು ಮೀಸಲಿಡುವ ಥರ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.
ಮುಂದಿನ ಕರ್ನಾಟಕ ನಿರ್ಮಾಣದ, ಅಭಿವೃದ್ಧಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ಮುಂದಿನ ಕರ್ನಾಟಕ ನಿರ್ಮಾಣದ ದಾರಿಯೂ ಸುಗಮವಾಗಿ ಕಂಡುಬರುವುದಿಲ್ಲ. ಗೆಲುವಿಗೆ ಸೀಮಿತವಾಗಿರುವ ಗ್ಯಾರಂಟಿ ಆಗಿದೆಯೇ ಹೊರತು ಅದರಿಂದ ಮಾನವ ವಿಕಾಸ ಕಾಣುತ್ತಿಲ್ಲ. ಈಗಾಗಲೇ ಅವರು ಘೋಷಿಸಿದ ಅನೇಕ ಯೋಜನೆಗಳನ್ನು ನಮ್ಮ ಜೆಡಿಎಸ್ ಸರಕಾರ ಮಾಡಿ ತೋರಿಸಿದೆ. ಕೆಲವು ಸಮುದಾಯಗಳು ತಮ್ಮ ವಾರಸುದಾರರು ಎಂಬ ರೀತಿಯಲ್ಲಿ ಬಜೆಟ್ ಒಳಗಡೆ ಎಲ್ಲ ಅಂಶಗಳನ್ನು ಸೇರಿಸಿದ್ದಾರೆ. ದೊಡ್ಡ ರೀತಿಯ ಸಾಲದ ಬಲೆಯ ಒಳಗೆ ರಾಜ್ಯ ಸಿಲುಕಲಿದೆ. ಮೊದಲ ವರ್ಷವೇ ದೊಡ್ಡ ಪ್ರಮಾಣದ ಸಾಲವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕವು ಹಿಂದೊಮ್ಮೆ ಕೋವಿಡ್ ನಿರ್ವಹಣೆ ಸೇರಿ ಅಭಿವೃದ್ಧಿಗಾಗಿ ಹೂಡಿಕೆಗೆ ಸಾಲ ತೆಗೆದುಕೊಂಡದಿದ್ದಿದೆ. ಆದರೆ, ಇಲ್ಲಿ ಚುನಾವಣಾ ಗ್ಯಾರಂಟಿ ಅನುಷ್ಠಾನಕ್ಕಾಗಿ ಸಾಲ ಮಾಡುವಂಥ ದಯನೀಯ ಸ್ಥಿತಿಗೆ ಸರಕಾರ ತೆಗೆದುಕೊಂಡು ಹೋಗಿದೆ. ಜೆಡಿಎಸ್ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿರವರನ್ನು ದೂಷಿಸುವುದು, ತನ್ಮೂಲಕ ರಾಜಕೀಯ ಬಂಡವಾಳ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯ ಲಾಭದತ್ತ ನೋಡುವುದು ಎದ್ದು ಕಾಣಿಸುತ್ತಿದೆ ಎಂದು ವಿವರಿಸಿದ್ದಾರೆ.



