Headlines

ಜಡಿಮಳೆಗೆ ಕೆಸರುಗದ್ದೆಯಾದ ರಸ್ತೆ: ಭತ್ತ ನಾಟಿ ಮಾಡಿ ಆಕ್ರೋಶ ಹೊರ ಹಾಕಿದ ಗ್ರಾಮಸ್ಥರು|Hosanagar News

ಸಂಪೂರ್ಣ ಹದಗೆಟ್ಟಿರುವ ರಸ್ತೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಗ್ರಾಮದ ಮಹಿಳೆಯರು, ಸಮಸ್ಯೆ ಬಗೆಹರಿಸದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬೈಸೆ ಗ್ರಾಮದ ಕೆರೆಗದ್ದೆಗೆ ತೆರಳಲು ಸರಿಯಾದ ರಸ್ತೆ ಸೌಕರ್ಯ ಇಲ್ಲದೆ, ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಹಿಳೆಯರು ಸೇರಿ ಹದಗೆಟ್ಟ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ಪ್ರತಿಭಟನೆ ನಡೆಸಿದ್ದಾರೆ.


ಕಳೆದ ಕೆಲವು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಹಲವೆಡೆ ರಸ್ತೆಗಳು ಹದಗೆಟ್ಟಿವೆ. ಮಳೆಗೆ ಬೈಸೆ ಸೇತುವೆಯಿಂದ ಕೆರೆಗದ್ದೆಗೆ ಹೋಗುವ ರಸ್ತೆ ಅಕ್ಷರಶಃ ಕೆಸರುಗದ್ದೆಯಂತಾಗಿದೆ. ರೈತರು, ಶಾಲಾ ಮಕ್ಕಳು, ವೃದ್ಧರು ಸಂಚರಿಸಲು ಕಷ್ಟವಾಗಿದೆ. ಆರೋಗ್ಯ ತುರ್ತು ಸಂದರ್ಭಗಳಲ್ಲಿ ಇಲ್ಲಿನ ಜನರ ಸಂಕಟ ಹೇಳತೀರದು.

ಕೆರೆಗದ್ದೆ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ ಅನುದಾನದ ಮೀಸಲಿಟ್ಟು ಚುನಾವಣೆಗೆ ಮುನ್ನ ಶಂಕುಸ್ಥಾಪನೆ ಮಾಡಲಾಗಿತ್ತು. ರಸ್ತೆ ಮೇಲೆ ಮಣ್ಣು ಹಾಕಿ ಕಾಮಗಾರಿ ಆರಂಭಿಸಲಾಗಿತ್ತು. ಚುನಾವಣೆ ಬಳಿಕ ಸ್ಥಗಿತಗೊಂಡ ರಸ್ತೆ ಕಾಮಗಾರಿ ಎರಡು ತಿಂಗಳು ಕಳೆದರೂ ಮತ್ತೆ ಪ್ರಾರಂಭವಾಗಿಲ್ಲ. ರಸ್ತೆಗೆ ಗ್ರಾವೆಲ್ ಮಣ್ಣು ಹಾಕಬೇಕಿತ್ತು. ಆದರೆ ಹತ್ತಿರದಲ್ಲೇ ಇದ್ದ ಕೆಂಪು ಮಣ್ಣನ್ನು ರಸ್ತೆಗೆ ಹಾಕಲಾಗಿದೆ. ಇದೀಗ ಧಾರಾಕಾರ ಮಳೆಯಿಂದಾಗಿ ರಸ್ತೆ ಹದಗೆಟ್ಟು ಸಂಪೂರ್ಣ ಕೆಸರುಗದ್ದೆಯಾಗಿದೆ. ರಸ್ತೆಯಲ್ಲಿ ಕಾಲು ಹುಗಿಯುತ್ತಿದ್ದು ಓಡಾಡಲು ತೊಂದರೆಯಾಗಿದೆ ಎನ್ನುವುದು ಗ್ರಾಮಸ್ಥರ ದೂರು. ಗ್ರಾಮಸ್ಥರೇ ಸ್ವಂತ ವೆಚ್ಚದಲ್ಲಿ ಅರ್ಧ ಕಿಮೀ ರಸ್ತೆಯ ಮೇಲಿನ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನೂ ಮಾಡಿದ್ದಾರೆ.

ಪ್ರತಿಭಟನೆ ನಡೆಸಿ ಮಾತನಾಡಿದ ಗ್ರಾಮದ ಮಹಿಳೆಯರು, “ಚುನಾವಣೆ ಬಳಿಕ ಜನಪ್ರತಿನಿಧಿಗಳ ಪತ್ತೆ ಇಲ್ಲ. ಗುತ್ತಿಗೆದಾರರ ಸುಳಿವೂ ಇಲ್ಲ. ನೋಡಿ ನೋಡಿ ನಮಗೆ ಸಾಕಾಗಿ ಹೋಗಿದೆ. ಹಾಗಾಗಿ ತುರ್ತಾಗಿ ರಸ್ತೆಗೆ ಜಲ್ಲಿ ಹಾಕಿ ಗ್ರಾಮಸ್ಥರಿಗೆ ಸಂಚರಿಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯತ್​​ ಮುಂದೆ ಸತ್ಯಾಗ್ರಹ ನಡೆಸುತ್ತೇವೆ. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರ ಮನೆ ಮುಂದೆ ಧರಣಿ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

Exit mobile version