ಶಿವಮೊಗ್ಗ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಸಂಸದ ಬಿವೈ ರಾಘವೇಂದ್ರ ಅವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರಚಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕೈ ನಾಯಕರು ಚಿಂತನೆ ನಡೆಸಿದ್ದಾರೆ.
ಹಾಗಾಗಿ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ ಮೂಲಕ ಆಪರೇಷನ್ ಕಾಂಗ್ರೆಸ್ಗೆ ಮುಂದಾಗಿದೆಯಂತೆ. ಒಂದು ವೇಳೆ ಆಪರೇಷನ್ ಕಾಂಗ್ರೆಸ್ ಯಶಸ್ವಿಯಾದ್ರೆ ಶಿವಮೊಗ್ಗ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುವ ಸಾಧ್ಯತೆಗಳಿವೆ.
ಹೌದು, ಕಾಗೋಡು ತಿಮ್ಮಪ್ಪ ಅವರ ಮೂಲಕ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಸಳೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆಯಂತೆ. ಸೊರಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿರುವ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಕುಮಾರ್ ಬಂಗಾರಪ್ಪ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ್ರೆ ಶಿವಮೊಗ್ಗದಿಂದ ಸ್ಪರ್ಧಿಸಲು ಅವಕಾಶ ನೀಡುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣೆಯ ಟಿಕೆಟ್ ಆಫರ್ ನೀಡಿ ಕುಮಾರ ಬಂಗಾರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿವೆ.
ಶಿವಮೊಗ್ಗದಲ್ಲಿ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ಗೆ ಕುಮಾರ್ ಬಂಗಾರಪ್ಪ ಅನಿವಾರ್ಯ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸೊರಬ ಕ್ಷೇತ್ರದಲ್ಲಿ 45 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿರುವ ಕುಮಾರ ಬಂಗಾರಪ್ಪ ಮುಂದಿನ ಐದು ವರ್ಷ ಕಾಯುವ ಅನಿವಾರ್ಯತೆವಿದೆ. ಆದ್ರಿಂದ ಕಾಂಗ್ರೆಸ್ ಆಫರ್ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಇನ್ನು ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಂಗಾರಪ್ಪ ಕುಟುಂಬ ತನ್ನದೇ ಆದ ಜನಪ್ರಿಯತೆ ಹೊಂದಿದೆ. ಸೊರಬದಿಂದ ಗೆದ್ದಿರುವ ಮಧು ಬಂಗಾರಪ್ಪ ಸಿದ್ದರಾಮಯ್ಯ ಸಂಪುಟ ಸೇರಿಕೊಂಡಿದ್ದಾರೆ. ಒಂದು ವೇಳೆ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದ್ರೆ ಶಿವಮೊಗ್ಗದಲ್ಲಿ ಸಹೋದರರಿಬ್ಬರು ಜೊತೆಯಾಗಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಪ್ರಚಾರ ನಡೆಸಬಹುದು ಎಂಬುವುದು ಕೈ ನಾಯಕರ ಲೆಕ್ಕಾಚಾರವಾಗಿದೆ.



