ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಸಮೀಪ ಅರೆಕಲ್ಲು ಬಳಿ ಆಗುಂಬೆ ರಸ್ತೆಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. 
 ಭದ್ರಾವತಿಯ ದಡಮಘಟ್ಟದಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ರೋಗಿಯೊಬ್ಬರನ್ನ ನೋಡಲು ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 
 ಇವತ್ತು ಮಧ್ಯಾಹ್ನ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಇಬ್ಬರು ಭದ್ರಾವತಿಯಿಂದ ಹೊರಟಿದ್ದರು. ಈ ವೇಳೆ ಆಗುಂಬೆಯ ಕಡೆಯಿಂದ ಬರುತ್ತಿದ್ದ ಕಾರೊಂದು ಓವರ್ ಸ್ಪೀಡ್ನಲ್ಲಿ ಬೈಕ್ಗೆ ಡಿಕ್ಕಿ ಹೊಡೆದಿದೆ. 
 ಡಿಕ್ಕಿಯಾದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಸಹ ಬಹಳಷ್ಟು ದೂರ ಹೋಗಿ ಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಕಾರು ಸಹ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. 
 ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ತೀರ್ಥಹಳ್ಳಿಯ ಆ್ಯಂಬುಲೆನ್ಸ್ ಚಾಲಕರು ರೆಹಮತ್, ಅನ್ಸರ್ ಹಾಗೂ ರಂಜಿತ್ ಗಾಯಾಳುಗಳ ಸಹಾಯಕ್ಕೆ ನಿಂತಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಮ್ತಿಯಾಜ್ ಹಾಗೂ ಫೈರೋಜ್ ರನ್ನ ಆ್ಯಂಬುಲೆನ್ಸ್ನಲ್ಲಿ ಸೀದಾ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ಧಾರೆ. 
 ಅಲ್ಲದೆ ಅವರ ಕುಟುಂಬಸ್ಥರಿಗೆ ವಿಷಯ ತಿಳಿಸಿ, ಗಾಯಾಳುಗಳ ಬಳಿ ಇದ್ದ ಒಂದು ಲಕ್ಷ ರೂಪಾಯಿ ಹಾಗೂ ಮೊಬೈಲ್ ಗಳನ್ನು ಅವರಿಗೆ ಒಪ್ಪಿಸಿದ್ಧಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 


