ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಪಕ್ಷದ ಘಟಾನುಗಟಿಗಳು ಇಂದು ನಾಮಪತ್ರ ಸಲ್ಲಿಸುವ ಮೂಲಕ ಚುನಾವಣ ಕಣ ರಂಗೇರಿದೆ. ಕಾಂಗ್ರೆಸ್‌ನಿಂದ ಹೆಚ್.ಸಿ. ಯೋಗೀಶ್, ಬಿಜೆಪಿಯಿಂದ ಎಸ್.ಎನ್. ಚನ್ನಬಸಪ್ಪ ಹಾಗೂ ಜೆಡಿಎಸ್‌ನಿಂದ ಆಯನೂರು ಮಂಜುನಾಥ್ ಇಂದು ವಿಧಾನಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದರು.
ಇಂದು ಮೊದಲು ಬಿಜೆಪಿಯಿಂದ ಜೆಡಿಎಸ್ ಪಕ್ಷ ಸೇರಿ ಬಿ ಫಾರಂ ಪಡೆಯಲು ಯಶಸ್ವಿಯಾದ ಆಯನೂರು ಮಂಜುನಾಥ್ ಪ್ರಥಮ ಬಾರಿಗೆ ಜಿಲ್ಲಾ ಜೆಡಿಎಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು.
ನಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್, ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕರೊಂದಿಗೆ ನೇರವಾಗಿ ನಗರ ಪಾಲಿಕೆ ಆವರಣದಲ್ಲಿ ಚುನಾವಣಾ ಕಚೇರಿಗೆ ತೆರಳಿ ಜೆಡಿಎಸ್ ಪಕ್ಷದ ಅದಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಶಿವಮೊಗ್ಗ ನಗರದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬ ಬಗ್ಗೆ ಖಚಿತ ವಿಶ್ವಾಸವಿದೆ. ಶಾಂತಿ ಮತ್ತು ಸೌಹಾರ್ದತೆಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳೊಂದಿಗೆ ನಾನು ಸೆಣೆಸಬೇಕಿದೆ. ಶಿವಮೊಗ್ಗದ ಜನತೆ ನೆಮ್ಮದಿಗಾಗಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೂರು ಪಕ್ಷಗಳ ಅಭ್ಯರ್ಥಿಗಳು ಲಿಂಗಾಯತ ಸಮುದಾಯದವರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜನರು ಮೂವರಲ್ಲಿ ಉತ್ತಮರಿಗೆ ಮತ ಕೊಡುತ್ತಾರೆ. ನಾನು ಜಾತಿ ಮಾಡುವುದಿಲ್ಲ, ನಮ್ಮ ಜನ ಪರ ಜಾತಿ, ಹಸಿವಿನ ಜಾತಿ ಎಂದು ತಿಳಿಸಿದರು.
ಬಿಜೆಪಿಯಿಂದ ಚೆನ್ನಿ ನಾಮಪತ್ರ ಸಲ್ಲಿಕೆ
ಬಿಜೆಪಿ ಅಭ್ಯರ್ಥಿಯಾಗಿ ಕಟ್ಟಾ ಹಿಂದೂವಾದಿ, ಈಶ್ವರಪ್ಪನವರ ಬಲಗೈ ಭಂಟ ಎಸ್.ಎನ್. ಚನ್ನಬಸಪ್ಪ ಇಂದು ಬೆಳಿಗ್ಗೆ ಕೋಟೆ ಶ್ರೀ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಮಹಾನಗರ ಪಾಲಿಕೆ ಆವರಣದ ಚುನಾವಣಾ ಕಚೇರಿಗೆ ಆಗಮಿಸಿ ಬಿಜೆಪಿಯ ಅಭ್ಯರ್ಥಿಯಾಗಿ ಉಮೇದುವರಿಕೆ ಸಲ್ಲಿಸಿದರು.
ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್ ಮತ್ತಿತರರಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಭ್ಯರ್ಥಿ ಚನ್ನಬಸಪ್ಪ, ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿರುವುದಕ್ಕೆ ಸಂತೋಷವಾಗಿದೆ. ಹಾಲಿ ಶಾಸಕರಾದ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿಯೇ ಈ ಚುನಾವಣೆ ಎದುರಿಸುತ್ತೇವೆ ಎಂದರು. ನನಗೆ ಟಿಕೆಟ್ ನೀಡಿರುವುದಕ್ಕೆ ಈಶ್ವರಪ್ಪನವರಿಗೆ ಯಾವುದೇ ಬೇಸರವಿಲ್ಲ. ನಾನು ಮತ್ತು ಅವರು ಸಂಘಟನೆ ಎರಡು ಮುಖಗಳಿದ್ದಂತೆ. ಈಶ್ವರಪ್ಪನವರ ಪ್ರಕಾರವೇ ಈ ಚುನಾವಣೆಯಲ್ಲಿ ಬಿಜೆಪಿ 60 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದೆ, ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಉತ್ಸಾಹಿತರಾಗಿದ್ದಾರೆ. ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಪಕ್ಷದಿಂದ ಇಂದು ಕೋಟೆ ಶ್ರೀ ಆಂಜನೇಯ ದೇವಾಲಯದಿಂದ ಎನ್‌ಡಿವಿ ಹಾಸ್ಟೆಲ್‌ವರೆಗೆ ಮೆರವಣಿಗೆ ಸಹ ನಡೆಯಿತು. ನಂತರ ಎನ್‌ಡಿವಿ ಹಾಸ್ಟೆಲ್ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಕಾಂಗ್ರೆಸ್ ಪಕ್ಷದಿಂದ ಯೋಗೀಶ್ ನಾಮಪತ್ರ ಸಲ್ಲಿಕೆ:
ಇಂದು ಪಕ್ಷಗಳ ಪೈಕಿ ಮೂರನೇಯವರಾಗಿ ಕಾಂಗ್ರೆಸ್‌ನ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನಾ ಅವರು ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ನಂತರ ಮೆರವಣಿಗೆ ಹೊರಟ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರು ಗಾಂದಿಬಜಾರ್, ನೆಹರೂ ರಸ್ತೆ ಮೂಲಕ ಮಹಾಗನರ ಪಾಲಿಕೆ ಆವರಣ ತಲುಪಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಬಳಿ ಅಭ್ಯರ್ಥಿ ಹೆಚ್.ಸಿ. ಯೋಗೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷ ನಗರಸಭೆ ಟಿಕೆಟ್‌ನ್ನು 3 ಬಾರಿ ನೀಡಿದ್ದು, 3 ಬಾರಿಯೂ ಗೆದ್ದಿದ್ದೇನೆ. ಈಗ ಇಲ್ಲಿನ ಚುನಾವಣಾ ಕಛೇರಿಯಲ್ಲಿ ಶಾಸಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಅವಕಾಶವನ್ನು ಪಕ್ಷ ಕಲ್ಪಿಸಿದೆ. ಸ್ವತಂತ್ರ ಹೋರಾಟಗಾರರ ಕುಟುಂಬದಿಂದ ಬಂದ ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ಜನರಿಗಾಗಿ ಪಾಲಿಕೆಯಲ್ಲಿ ಸಾಕಷ್ಟು ಹೋರಾಟ ಮಾಡುತ್ತ ಬಂದಿದ್ದೇನೆ. ಈ ಅಂಶಗಳು ಶಾಸಕನಾಗಿ ಜಯಗಳಿಸಲು ಅನುಕೂಲವಾಗುವುದು ಎಂದರು.
ಬಿಜೆಪಿ ಸರ್ಕಾರದ ಭಷ್ಟಾಚಾರ, ಉದ್ಯೋಗ ಕಡಿತ, ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ, ಅಶಾಂತಿ ವಾತಾವರಣ ದೂರ ಮಾಡುವುದು ಇತ್ಯಾದಿ ಈ ಚುನಾವಣೆಯ ವಿಷಯವಾಗಲಿದೆ ಎಂದರು.
ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಇಂದು ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ವಿಶೇಷವಾಗಿತ್ತು. ಚುನಾವಣ ಕಛೇರಿ ಬಳಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.