ಶಿವಮೊಗ್ಗ : ಗೃಹಿಣಿ ಆತ್ಮಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಗಂಡ, ಅತ್ತೆ, ನಾದಿನಿಗೆ ಕಠಿಣ ಜೈಲು ಶಿಕ್ಷೆ, ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲವಾದರೆ ಇನ್ನು ಆರು ತಿಂಗಳು ಜೈಲು ಶಿಕ್ಷೆ ಮುಂದುರಿಯಲಿದೆ ಆದೇಶಿಸಿದೆ.
ಶಿವಮೊಗ್ಗ ನಗರದ ಗೃಹಿಣಿಯೊಬ್ಬರು 2020ರ ಮೇ 18ರಂದು ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಘಟನೆ ಸಂಬಂಧ ಗೃಹಿಣಿಯ ತಾಯಿ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಗಂಡನ ಮನೆಯಲ್ಲಿ ವರದಕ್ಷಿಣೆ ತರುವಂತೆ, ಬೈಕ್ ಕೊಡಿಸುವಂತೆ ಕಿರುಕುಳ ನೀಡುತ್ತಿದ್ದರು. ಸಣ್ಣಪುಟ್ಟ ವಿಚಾರಕ್ಕೂ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು.
ಗೃಹಿಣಿಯ ಪತಿ ಶಿವರಾಜ್ ಅಲಿಯಾಸ್ ಮಧು, ಅತ್ತೆ ಶಾಂತಾ, ನಾದಿನಿ ದೀಪಾ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ತೀರ್ಪು ಪ್ರಕಟಿಸಿದ ಕೋರ್ಟ್
ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಸ್.ಮಾನು ಅವರು ವಿಚಾರಣೆ ನಡೆಸಿದರು. ಆರೋಪ ಸಾಬೀತಾದ ಹಿನ್ನೆಲೆ ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ತಲಾ 16 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ 6 ತಿಂಗಳು ಸಾದಾ ಕಾರಗೃಹ ಶಿಕ್ಷೆ ವಿಧಿಸಿದ್ದಾರೆ.