Headlines

ಇಬ್ಬರೂ ಒಟ್ಟಾದ್ರೆ ಏನ್ ಭೂಕಂಪ ಆಗುತ್ತಾ ; ಕಿಮ್ಮನೆ-ಆರ್‌ಎಂಎಂಗೆ ತಿವಿದ ಆರಗ ಜ್ಞಾನೇಂದ್ರ|thirthahalli

ರಿಪ್ಪನ್‌ಪೇಟೆ : ಟಿಕೆಟ್‌ಗಾಗಿ ಅಥವಾ ಮಂತ್ರಿ ಸ್ಥಾನಕ್ಕಾಗಿ ದೆಹಲಿಗೆ ಹೋಗುವವನು ನಾನಲ್ಲ. ಇಂತಹ ಸಂದರ್ಭ ಬರುವುದಿಲ್ಲ. ಸಂದರ್ಭ ಬಂದಲ್ಲಿ ಚುನಾವಣಾ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ. ಯಾವುದೇ ಕಾರಣ ಕೊಡದೆ ಇನ್ನೊಬ್ಬರಿಗಾಗಿ ಕೆಲಸ ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.




ಕೋಡೂರಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 10 ಬಾರಿ ಒಂದೇ ಪಕ್ಷ ಒಂದೇ ಚಿಹ್ನೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 4 ಬಾರಿ ಶಾಸಕನಾಗಿದ್ದೇನೆ. ಇದು ನನ್ನ ಕೊನೆಯ ಚುನಾವಣೆ. ನಾನು ತತ್ವಕ್ಕಾಗಿ, ಸಿದ್ದಂತಕ್ಕಾಗಿ ರಾಜಕಾರಣ ಮಾಡುವವನು. ಈ ರಾಷ್ಟ್ರ ಕಟ್ಟುವುದು ನಮ್ಮ ಕೆಲಸ. ಇಲ್ಲಿ ನನ್ನ ಸ್ವಂತಿಕೆ ಇಲ್ಲ. ಶಾಸಕನಾಗಬೇಕು ಮಂತ್ರಿ ಆಗಬೇಕು ಎಂದಿಲ್ಲ. ಎಲ್ಲರ ನೆರವಿನಿಂದ ನಾನು ಬೆಳೆದಿದ್ದೇನೆ. ನನ್ನ ಕಾರ್ಯಕರ್ತರು ನನಗೆ ದೇವರು ಸಮಾನ. ಹಾಗಾಗಿ ಅವರು ಚುನಾವಣೆ ಸಂದರ್ಭದಲ್ಲಿ ತೊಡೆ ತಟ್ಟಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.




ಅಡಿಕೆ ಬೆಳೆಗೆ ರಕ್ಷಾ ಕವಚವಾಗಿ ನಾನಿದ್ದೇನೆ. ಮಲೆನಾಡಿನ ಜನ ಆರ್ಥಿಕವಾಗಿ ಸಬಲರಾಗಲು ಅಡಿಕೆ ಬೆಳೆಯೇ ಮುಖ್ಯ ಕಾರಣ ಎಂದ ಅವರು, ಕಳೆದೆರಡು ವರ್ಷದಲ್ಲಿ 3.254 ಕೋಟಿ ರೂ. ತೀರ್ಥಹಳ್ಳಿ ಕ್ಷೇತ್ರದ ಅಭಿವದ್ಧಿಗಾಗಿ ಹಣ ತಂದಿದ್ದೇನೆ. ಒಂದೂ ರಸ್ತೆಯನ್ನು ಮಾಡದವರು ಮತ್ತೆ ಚುನಾವಣೆಗೆ ನಿಂತಿದ್ದಾರೆ . ನಾವಿಬ್ಬರು ಒಟ್ಟಾಗಿದ್ದೇವೆ. ಈ ಬಾರಿ ಗೆಲುವು ನಮ್ಮದೇ ಎಂದು ಹೇಳುವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ ಮಂಜುನಾಥಗೌಡ ವಿರುದ್ಧ ಹರಿಹಾಯ್ದ ಅವರು, ಒಟ್ಟಾದ್ರೆ ಏನು ಭೂಕಂಪ ಆಗುತ್ತಾ ? ಒಂದೇ ಹಾರ ಇಬ್ರು ಕೊರಳಿಗೆ ಹಾಕಿ ಕೊಂಡು ಓಡಾಡುತ್ತಿದ್ದಾರೆ. ಅಭಿವೃದ್ಧಿಗೆ ಜನ ಮತ ಕೊಡುವುದಾದರೆ ಅವರಿಗೆ ಈ ಬಾರಿ ಠೇವಣಿ ಸಹ ಸಿಗುವುದಿಲ್ಲ ಎಂದರು.

ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಗ್ರಾಪಂ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ ಮಂಜುನಾಥ್, ಆರ್.ಟಿ ಗೋಪಾಲ್, ತಾಲೂಕು ಬಿಜೆಪಿ ಅಧ್ಯಕ್ಷ ಬಿಳಗೋಡು ಗಣಪತಿ, ಕೋಡೂರು ಗ್ರಾಪಂ ಸದಸ್ಯರು, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಪುಟ್ಟಪ್ಪ, ಅರುಣ್ ಕುಮಾರ್, ಬಿಜೆಪಿ ಕಾರ್ಯಕರ್ತರು ಇದ್ದರು.



Leave a Reply

Your email address will not be published. Required fields are marked *

Exit mobile version