ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಬಂಜಾರ ಸೇರಿದಂತೆ ವಿವಿಧ ಸಮುದಾಯದ ವತಿಯಿಂದ ಪ್ರತಿಭಟನೆ ನಡೆಸಿದರು.ಈ ವೇಳೆ ಕಲ್ಲು ತೂರಾಟ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಾ.ಅಂಬೇಡ್ಕರ್ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕೆಲವರು ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಶಿಕಾರಿಪುರದ ಮಿನಿ ವಿಧಾನಸೌಧ, ಬಸ್ ನಿಲ್ದಾಣದ ಬಳಿ ಬಂಜಾರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದರು. ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕೆಲವರು ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಬ್ಯಾನರ್, ಫ್ಲೆಕ್ಸ್‌ಗಳನ್ನು ಕಿತ್ತೊಗೆದಿದ್ದಾರೆ. ಈ ವೇಳೆ ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯತ್ತ ಕಲ್ಲು ತೂರಾಟ ಮಾಡಲಾಗಿದೆ. ಕಿಟಕಿ ಗಾಜುಗಳು ಪುಡಿಯಾಗಿದೆ. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಿಕಾರಿಪುರದಾದ್ಯಂತ 144 ಸೆಕ್ಷನ್ ಜಾರಿ
ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ವೈ ಮನೆಯ ಮೇಲೆ ಕಲ್ಲು ತೂರಾಟ ನಡೆಯುತ್ಯಿದ್ದಂತೆ ಶಿಕಾರಿಪುರದಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಒಳ ಮೀಸಲಾತಿಯಲ್ಲಿ ಲಂಬಾಣಿ ಜನಾಂಗಕ್ಕೆ ಕಡಿತಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನ ವಿರೋಧಿಸಿ ಇಂದು ಶಿಕಾರಿಪುರದಲ್ಲಿ ಲಂಬಾಣಿ ಸಮುದಾಯ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ಮಾಜಿ ಸಿಎಂ ಬಿಎಸ್ ವೈಮನೆಯ ಮೇಲೆ ಕಲ್ಲು ತೂರಲಾಗಿತ್ತು.
ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆದಿತ್ತು. ಮಾಜಿ ಸಿಎಂ ಬಿಎಸ್ ವೈ ಹುಟ್ಟುಹಬ್ಬದ ವೇಳೆ ಹಂಚಲಾದ ಸೀರೆಯನ್ನ ಬೀದಿಗೆ ತಂದು ಬೆಂಕಿ ಹಚ್ಚಲಾಗಿತ್ತು. ಪರಿಸ್ಥಿತಿಯನ್ನ ಅವಲೋಕಿಸಿದ ತಾಲೂಕು ಆಡಳಿತ ಪಟ್ಟಣದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.