ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಮದಲ್ಲಿ ಶನಿವಾರ ನಡೆದ ”ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಸಾರ್ವಜನಿಕ ಅಹವಾಲುಗಳ ಸ್ವೀಕಾರ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಬಾರದೇ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಜೇನಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹೊಸನಗರ ತಹಶೀಲ್ದಾರ್ ಧರ್ಮಂತ ಗಂಗರಾಮ್ ಕೋರಿ ಉದ್ಘಾಟಿಸಿದರು.
ನಂತರ ಸಾರ್ವಜನಿಕ ಅಹವಾಲು ಸ್ವೀಕರಿಸುತಿದ್ದ ಸಂಧರ್ಭದಲ್ಲಿ ಗ್ರಾಮಸ್ಥರು ನಮ್ಮೂರಿನಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ ಅದನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಪ್ರಸ್ತಾಪಿಸಿ ಪರಿಹಾರ ಪಡೆಯುವ ಇರಾದೆಯಲ್ಲಿದ್ದೇವು ಆದರೆ ಜಿಲ್ಲಾಧಿಕಾರಿಗಳು ಬಾರದೇ ಇರುವುದು ನಿರಾಸೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಹಿರೆಮೈತೆ,ಕರಿಗೆರಸು ಭಾಗದಲ್ಲಿ ನೀರಿನ ಸಮಸ್ಯೆ ಬಹಳಷ್ಟಿದ್ದು ಅರಣ್ಯ ಅಧಿಕಾರಿಗಳು ಬೋರ್ ವೆಲ್ ಕೊರೆಸಲು ಅನುಮತಿ ನೀಡುತ್ತಿಲ್ಲ ಇದರಿಂದ ಜನ ಜಾನುವಾರು ,ಅಡಿಕೆ ತೋಟ ಹಾಗೂ ಇನ್ನಿತರ ಕೃಷಿ ಚಟುವಟಿಗಳಿಗೆ ಸಂಚಕಾರ ಉಂಟಾಗಿದೆ ಎಂದು ತಮ್ಮ ಅಳಲನ್ನು ತೀಡಿಕೊಂಡರು.
ತಹಶೀಲ್ದಾರ್ ಧರ್ಮಂತ ಗಂಗರಾಮ್ ಕೋರಿ ಮಾತನಾಡಿ ಸಾಕಷ್ಟು ಜನ ರೈತರು ಪಹಣಿ ತಿದ್ದುಪಡೆ ಪಿಂಚಣಿ ಸೌಲಭ್ಯ ಪಡೆಯುವದು ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಹಾಗೂ ತಾಲೂಕಾ ಕೇಂದ್ರಕ್ಕೆ ಬರುತ್ತಾರೆ ಕೆಲ ಸಮಯದಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಇಲ್ಲದಿರುವುದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ ಇದನ್ನೆಲ್ಲ ಗಮನಿಸಿದ ಸರ್ಕಾರ ಗ್ರಾಮೀಣ ಭಾಗದ ಜನರ ಮನೆ ಭಾಗಿಲಿಗೆ ಸರ್ಕಾರದ ಯೋಜನೆ ಮುಟ್ಟಿಸುವಲ್ಲಿ ಇಂತಹ ಕಾರ್ಯಕ್ರಮ ಗಳನ್ನು ಆಯೋಜಿಸುತ್ತದೆ ಇದರಲ್ಲಿ ತಾವುಗಳು ಅರ್ಜಿ ಸಲ್ಲಿಸುವ ಮೂಲಕ ಸ್ಥಳದಲ್ಲಿ ಯೇ ತಮ್ಮ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ ಎಂದರು.
ಇಂದಿನ ಜಿಲ್ಲಾಧಿಕಾರಿಗಳ ನಡೆ – ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸ್ವೀಕರಿಸುವ ಅಹವಾಲುಗಳನ್ನು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಇತ್ಯರ್ಥ ಪಡಿಸಲಾಗುವುದು ಎಂದು ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು.
ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಿ
ನಮ್ಮೂರಿನ ಪ್ರತಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದು ಗ್ರಾಮದ ಸ್ವಾಸ್ಥ್ಯವನ್ನು ಹಾಳುಗೆಡವುತಿದ್ದಾರೆ,ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರೆ ಕವಡೆ ಕಾಸಿನ ಕಿಮ್ಮತ್ತು ಕೊಡುತಿಲ್ಲ ಎಂದು ಸಭೆಯಲ್ಲಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಎನ್ ಪಿ ರಾಜು ಮಾತನಾಡಿ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ಅಂಗಡಿಗಳಲ್ಲೂ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಶಾಲಾ ಮಕ್ಕಳ ಮೇಲೂ ದುಷ್ಪರಿಣಾಮ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು,ಈ ಬಗ್ಗೆ ಚಿಕ್ಕಜೇನಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕಳಿಸಿಕೊಡಲಾಗಿತ್ತು ಆದರೆ ಈ ಬಗ್ಗೆ ಇಲ್ಲಿಯವರೆಗೂ ಅಧಿಕಾರಿಗಳು ಯವುದೇ ಜಾಣಕುರುಡು ಪ್ರದರ್ಶಿಸುತ್ತಿರುವುದು ನಾಗರೀಕರಲ್ಲಿ ಅಸಮಾಧಾನ ಮೂಡಿಸಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ತಹಶೀಲ್ದಾರರ ಬಳಿ ಮನವಿ ಮಾಡಿದರು.
ಕಾರ್ಯಕ್ರಮದ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಗ್ರೇಡ್ 2 ಉಪ ತಹಶೀಲ್ದಾರ್ ರಾಕೇಶ್ ಹಳ್ಳಿಯ ಜನರು ಸಣ್ಣಪುಟ್ಟ ಸಮಸ್ಯೆ ಎದುರಾದಾಗಾಲೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿಯಿದೆ. ಇದನ್ನು ತಪ್ಪಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ.
ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಪಾವತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಡಿಸಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬೇಕಿದೆ.
ಅಕ್ರಮ ಮದ್ಯ ಮಾರಾಟ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂಧರ್ಭದಲ್ಲಿ ಚಿಕ್ಕಜೇನಿ ಗ್ರಾಪಂ ಅಧ್ಯಕ್ಷೆ ರಾಧಮ್ಮ ಉಪಾಧ್ಯಕ್ಷರಾದ ಗಾಯತ್ರಿ,ಗ್ರಾಪಂ ಸದಸ್ಯರು, ಉಪ ತಹಶೀಲ್ದಾರ್ ಹುಚ್ಚರಾಯಪ್ಪ ,ಕಂದಾಯ ಅಧಿಕಾರಿಗಳಾದ ಸೈಯದ್ ಅಫ಼್ರೋಜ಼್,ಪಿಡಿಓ ಮಂಜುಳಾ ಹಾಗೂ ಗ್ರಾಮಸ್ಥರು ಇದ್ದರು.