ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.
ನಿರೀಕ್ಷೆಯಂತೆ ಸೊರಬ ವಿಧಾನಸಭೆ ಕ್ಷೇತ್ರದಿಂದ ಮಧು ಬಂಗಾರಪ್ಪ, ಭದ್ರಾವತಿಯಿಂದ ಬಿ.ಕೆ.ಸಂಗಮೇಶ್ವರ, ಸಾಗರದಿಂದ ಬೇಳೂರು ಗೋಪಾಲಕೃಷ್ಣ ಅವರ ಹೆಸರನ್ನು ಪ್ರಕಟಿಸಲಾಗಿದೆ. ಮೂರು ಕ್ಷೇತ್ರದ ಅಭ್ಯರ್ಥಿಗಳನ್ನು ಪ್ರಕಟಿಸಿರುವುದು ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ.
ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ರವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಹುಟ್ಟಿಸಿದೆ.
ಜಿಲ್ಲೆಯ ಇನ್ನೂ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಸ್ಪೆನ್ಸ್ ಉಳಿಸಿದೆ. ಮೊದಲ ಪಟ್ಟಿಯಲ್ಲೇ ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗುವ ನಿರೀಕ್ಷೆ ಇತ್ತು. ಆದರೀಗ ಕುತೂಹಲ ಮುಂದುವರೆದಿದೆ.
ಇನ್ನು, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಮೊದಲ ಪಟ್ಟಿಯಲ್ಲಿ ಇವೆರಡೂ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಲೆಕ್ಕಾಚಾರ ಇರುವುದರಿಂದ ಆ ಕ್ಷೇತ್ರದ ಅಭ್ಯರ್ಥಿ ಹೆಸರು ಮುಂದಿನ ಪಟ್ಟಿಗೆ ಹೋಗಿದೆ.