Headlines

VISIL ಕಾಮಿಕರ ಪರವಾಗಿ ಜೈಲಿಗೆ ಹೋಗಲು ಸಿದ್ದ – ಹೆಚ್ ಡಿ ಕುಮಾರಸ್ವಾಮಿ

ಭದ್ರಾವತಿ : ವಿಐಎಸ್‌ಎಲ್ ವಿಷಯದಲ್ಲಿ ಕನ್ನಡಿಗರು ಇನ್ನೂ ಬದುಕಿದ್ದಾರೆ ಎಂದು ಕೇಂದ್ರಕ್ಕೆ ತಿಳಿಸುವ ಅಗತ್ಯ ಇದೆ.ಕಾರ್ಮಿಕರ ಪರವಾಗಿ ಜೈಲಿಗೆ ಹೋಗಲು ಸಿದ್ದ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಭದ್ರಾವತಿಯಲ್ಲಿ ಪ್ರತಿಭಟನಾ ನಿರತ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದ ಕುಮಾರಸ್ವಾಮಿಯವರು, ಅಂದು 650 ಕೋಟಿ ವೆಚ್ಚ ಮಾಡಿ ಕಾರ್ಖಾನೆ ಅಭಿವೃದ್ಧಿಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.  ದೇವೇಗೌಡರು ಪ್ರಧಾನಿ ಆಗಿದ್ದಾಗ ವಿಐಎಸ್‌ಎಲ್ ಅನ್ನು ಸೈಲ್​ಗೆ ಹಸ್ತಾಂತರಿಸುವ ತೀರ್ಮಾನ ತೆಗೆದುಕೊಂಡರು. ಈ ವಿಷಯದಲ್ಲಿ ಮಾಜಿ ಶಾಸಕ ದಿವಂಗತ ಅಪ್ಪಾಜಿ ಗೌಡರ ಶ್ರಮ ಇದೆ  ನಿರ್ಗಮಿಸಿದ ನಂತರ ಹಣ ಹೂಡುವ ಯತ್ನ ನನೆಗುದಿಗೆ ಬಿತ್ತು ಎಂದು ಹೇಳಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿಯವರು, ಬಿಎಸ್​ವೈ ಯಾವ ಪುರುಷಾರ್ಥಕ್ಕೆ ಏರ್​ಪೋರ್ಟ್​ ಕಟ್ಟಿದ್ದಾರೋ ಗೊತ್ತಿಲ್ಲ. ಸಾವಿರಾರು ಜನರನ್ನು ಬೀದಿಗೆ ತಳ್ಳಿ ಏರ್​ಪೋರ್ಟ್​ ನಿರ್ಮಿಸಿದ್ದಾರೆ. ಹಿಂದೆ ಇದೇ ವ್ಯಕ್ತಿ ನಾನು ಬಿಜೆಪಿ ಬಿಡಲು ಸಿದ್ದವಿದ್ದು, ನನಗೆ ನಿಮ್ಮ ಪಕ್ಷದಲ್ಲಿ ಮಂತ್ರಿ ಸ್ಥಾನ ನೀಡುತ್ತೀರಾ ಎಂದು ಕೇಳಿದ್ದರು. ಆದರೆ ನಾನು ನಿಮ್ಮ ಪಕ್ಷದಲ್ಲಿ 50 ರಿಂದ 60 ಶಾಸಕರು ಬಿಜೆಪಿ ಬಿಡಲು ಸಿದ್ದವಿದ್ದು, ಅವರ ಜೊತೆ ಸೇರಿ ಮುಂದುವರಿಯಿರಿ ಎಂದು ಹೇಳಿದ್ದೆ. ಆದರೆ ಅವರು ಮುಂದೆ ಯಾವ ರೀತಿ ನಡೆದುಕೊಂಡರು ಎಂದು ಎಲ್ಲರಿಗೂ ತಿಳಿದಿದೆ. ಮಂಡ್ಯದಲ್ಲಿ ಹುಟ್ಟಿ ಶಿವಮೊಗ್ಗಕ್ಕೆ ಬಂದ ನೀವು ಇದೇ ಊರಿನ ಕಾರ್ಖಾನೆ ಮುಚ್ಚುತ್ತಿದ್ದರೂ ಸುಮ್ಮನೆ ಇದ್ದೀರಾ. ಹೋಗಿ ಪ್ರಧಾನಿ ಮುಂದೆ ನಿಂತು ಕಾರ್ಖಾನೆ ಕಾರ್ಮಿಕರ ಸಮಸ್ಯೆ ವಿವರಿಸಿ. ಸಾಧ್ಯವಾಗದಿದ್ದರೆ ಕನಿಷ್ಠ 4 ತಿಂಗಳು ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಿ. ಈ ಜಿಲ್ಲೆಯ ಜನರಿಂದ ನಾವು ಬದುಕಿದ್ದೇವೆ ಎಂದು ನಿಮ್ಮ ಮನಸಾಕ್ಷಿಗೆ ಅನಿಸಿದರೆ ಕಾರ್ಮಿಕರ ನೋವಿಗೆ ಸ್ಪಂದಿಸಿ ಎಂದು ಸಭೆಯಲ್ಲಿ ಹೇಳಿದ್ದಾರೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಯನ್ನು ಹೇಗೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದು ನಾವು. ಪರ್ಸಂಟೇಜ್ ಹಾವಳಿ ತಪ್ಪಿಸಿದರೆ ಜನರು ನೀಡುವ ಸಾವಿರಾರು ಕೋಟಿ ತೆರಿಗೆ ಹಣದಲ್ಲಿ ಕಾರ್ಖಾನೆಯನ್ನು ಅಭಿವೃದ್ಧಿ ಮಾಡಬಹುದು. ದೇವೇಗೌಡರು ಪ್ರಧಾನಿಗೆ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಗುತ್ತಿಗೆದಾರ ಕಾರ್ಮಿಕರು ಆತಂಕಕ್ಕೆ ಒಳಗಾಗುವುದು ಬೇಡ. ಆರಗ ಜ್ಞಾನೇಂದ್ರ ಅಧ್ಯಕ್ಷರಾಗಿದ್ದಾಗ ಎಂಪಿಎಂ ಅಭಿವೃದ್ಧಿಗೆ ನೀಡಿದ ಹಣವನ್ನು ಹೇಗೆ ಲೂಟಿ ಹೊಡೆದರು ಎಂದು ನನಗೆ ಗೊತ್ತಿದೆ. ಇನ್ನು ಮೂರು ತಿಂಗಳಲ್ಲಿ ಹೊಸ ಸರ್ಕಾರ ಬರಲಿದೆ. ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಲ್ಲಿ ನಮ್ಮ ಜೆಡಿಎಸ್ ನ ಪಾಲಿದೆ. ರಾಜ್ಯದ ತಾಯಂದಿರು ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಆಶೀರ್ವಾದ ಮಾಡುತ್ತಿದ್ದಾರೆ. ನಾನು ಹೋದ ಕಡೆಯಲೆಲ್ಲಾ ಜೆಡಿಎಸ್​ಗೆ ಉತ್ತಮ ಪ್ರತಿಕ್ರಿಯೆ ಇದೆ ಎಂದು ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

27 ಪ್ರಧಾನಿ ಏರ್​ಪೋರ್ಟ್ ಉದ್ಘಾಟನೆಗೆ ಬಂದಾಗ ನಾವು ಹೋರಾಟ ಮಾಡೋಣ. ನಾನು ಹೋರಾಟದ ನೇತೃತ್ವ ವಹಿಸಲು ಸಿದ್ಧ. ನನ್ನನ್ನು ಜೈಲಿಗೆ ಹಾಕಿದರೂ ಚಿಂತೆಯಿಲ್ಲ. ನಾವೇ ಬಂಡವಾಳ ಹಾಕಿ ಎರಡೂ ಕಾರ್ಖಾನೆಯನ್ನು ಅಭಿವೃದ್ಧಿ ಮಾಡುತ್ತೇವೆ. ಕಾರ್ಖಾನೆ ಮುಚ್ಚಲು ಯಡಿಯೂರಪ್ಪ ಅವರ ಮಗ ರಾಘವೇಂದ್ರ ಅವರನ್ನು ಎರಡು ಬಾರಿ ಸಂಸದರನ್ನಾಗಿ ಮಾಡಲಾಯಿತೇ?. ಹಾಗಾಗಿ ಜನತೆ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ರೀತಿಯಲ್ಲಿ ಉತ್ತರ ನೀಡಬೇಕು ಎಂದು ಪ್ರತಿಭಟನಾ ನಿರತ ಗುತ್ತಿಗೆ ಕಾರ್ಮಿಕರ ಪರವಾಗಿ ಮಾತನಾಡಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಭದ್ರಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ ಮತ್ತಿತರು ಉಪಸ್ಥಿತಿ ಇದ್ದರು.

Leave a Reply

Your email address will not be published. Required fields are marked *

Exit mobile version