ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು 108 ಅಡಿಯ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಸಿದ್ಧ ದೇವಾಲಯಗಳು, ಪ್ರಸಿದ್ಧ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಕೆಂಪೇಗೌಡರ ಪುತ್ಥಳಿ ಕೆಳಗೆ ಇಡಲಾಗುವುದು. ಈ ಕಾರ್ಯಕ್ರಮವು ಸರ್ಕಾರದ ವತಿಯಿಂದ ನಡೆಯುತ್ತಿದ್ದು, ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಯುತ್ತಿದೆ.
ಮೃತ್ತಿಕೆ ಸಂಗ್ರಹ ಅಭಿಯಾನ ರಥವು ರಿಪ್ಪನ್‌ಪೇಟೆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆಯೇ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಹಾಗೂ ನಾಡಕಛೇರಿ ಉಪತಹಶೀಲ್ದಾರ್ ಹುಚ್ಚರಾಯಪ್ಪ ನೇತ್ರತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ರಥವನ್ನು ಬರಮಾಡಿಕೊಂಡರು.
ಕೆಂಪೇಗೌಡರ ಪ್ರತಿಮೆಯ ರಥವು ಗ್ರಾಮ ಪ್ರವೇಶಿಸುತ್ತಿದ್ದಂತೆ ನೂರಾರು ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಗತಿಸಿ ಮಹಿಳೆಯರ ಡೊಳ್ಳು, ವೀರಗಾಸೆ, ತಮಟೆಯ ಮೆರವಣಿಗೆಯೊಂದಿಗೆ ಸಾಗರ ರಸ್ತೆಯಿಂದ ಸಿದ್ದಿವಿನಾಯಕ ದೇವಸ್ಥಾನಕ್ಕೆ ಕರೆತರಲಾಯಿತು.
ವಿನಾಯಕ ವೃತ್ತದಲ್ಲಿ ಸಹಕಾರಿ ಧುರೀಣ ಆರ್ ಎಂ ಮಂಜುನಾಥ್ ಗೌಡ ಕೆಂಪೇಗೌಡ ರಥಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.
ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಹಾಗೂ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ ಷರೀಫ್, ಅರಸಾಳು ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷೆ ಹೂವಪ್ಪ (ಉಮಾಕರ) ಇನ್ನಿತರರು ಗ್ರಾಮ ಪಂಚಾಯ್ತಿಗಳಿಂದ ತರಲಾದ ಪವಿತ್ರ ಮೃತ್ತಿಕೆಯನ್ನು ವಿನಾಯಕ ದೇವಸ್ಥಾನದಲ್ಲಿ ರಥಕ್ಕೆ ಸಮರ್ಪಿಸಿದರು.
ನಂತರ ರಥವನ್ನು ಹುಂಚ ಮಾರ್ಗವಾಗಿ ಹೊಸನಗರಕ್ಕೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಎಂ.ಬಿ.ಮಂಜುನಾಥ ,ಎಂ ಎಂ ಪರಮೇಶ್, ಕೆ.ದೇವರಾಜ್ ಕೆರೆಹಳ್ಳಿ, ಷಣ್ಮುಖಪ್ಪ, ಕೆರೆಹಳ್ಳಿ ರವೀಂದ್ರ,ಕಲ್ಲೂರು ತೇಜಮೂರ್ತಿ, ಮಂಜಣ್ಣ ಡ್ರೈವರ್ ಕೋಟೆತಾರಿಗ, ಪ್ರಕಾಶ್, ಬೆಳ್ಳೂರು ತಿಮ್ಮಪ್ಪ, ಮಹಿಳಾ ಒಕ್ಕಲಿಗ ಸಂಘದ ಪ್ರಮಿಳಾ ಎಲ್.ಗೌಡ, ವಾಣಿ ಗೋವಿಂದಪ್ಪಗೌಡ, ಮಹಿಳಾ ನಿರ್ದೇಶಕರು ಹಾಗೂ ಪಂಚಾಯ್ತಿ ಪಿಡಿಓ ಜಿ.ಚಂದ್ರಶೇಖರ್, ಎನ್.ವರ್ತೇಶ್,ಆಸೀಫ಼್ ಭಾಷಾಸಾಬ್, ನಿರೂಪ್ ಕುಮಾರ್, ಕಲ್ಲೂರು ಈರಪ್ಪ ಹಾಗೂ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.