Headlines

ಬೊಮ್ಮಾಯಿ ಸರ್ಕಾರಕ್ಕೆ ತಾಕತ್ ಇದ್ರೆ ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲಿ – ಮಧು ಬಂಗಾರಪ್ಪ|Sharavathi

ಬೊಮ್ಮಾಯಿ ಸರ್ಕಾರಕ್ಕೆ ತಾಕತ್ ಇದ್ರೆ ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡಿ ಎಂದು ಕೆಪಿಸಿಸಿ ಹಿಂದೂಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.




ಶಿವಮೊಗ್ಗದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರ ಬುಡಕ್ಕೆ ಕೈ ಹಾಕುವ ಮೂಲಕ ಜೇನುಗೂಡಿಗೆ ಬಿಜೆಪಿ ಸರ್ಕಾರಕ್ಕೆ ಕೈ ಹಾಕಿದೆ ಇದು ಅವರನ್ನು ಸುಮನ್ನೆ ಬಿಡುವುದಿಲ್ಲ. ನಾಡಿಗೆ ಬೆಳಕು ಕೊಟ್ಟವರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಬಿಜೆಪಿ ಸರ್ಕಾರದ ಅಂತ್ಯ ಶುರುವಾಗಿದೆ. ಮಾನ ಮಾರ್ಯಾದೆ ಇಲ್ಲ, ಸರ್ಕಾರಕ್ಕೆ ದಮ್ ಇದ್ರೆ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡು ಭೂಮಿ ಹಂಚಿಕೆ ಮಾಡಬೇಕು. ಇಲ್ಲ ಅಂದ್ರೆ ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಕರ್ತವ್ಯ ಲೋಪದಿಂದಾಗಿ ಇಂದು ಶರಾವತಿ ಮುಳುಗಡೆ ಸಂತ್ರಸ್ತರು ಜಮೀನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಪರಿಸರವಾದಿಗಳ ಹೆಸರಿನಲ್ಲಿ ಕೆಲವರು ಹೈಕೋರ್ಟ್‌ಗೆ ಹೋಗಿರುವುದರಿಂದ ಡಿ ನೋಟಿಫಿಕೇಶನ್ ರದ್ದಾಗಿದೆ. ಇದು ಇಡೀ ಶರಾವತಿ ಮುಳುಗಡೆ ಸಂತ್ರಸ್ತರ ಬದುಕಿನ ಪ್ರಶ್ನೆಯಾಗಿದೆ ಎಂದರು. ಶಿವಮೊಗ್ಗ ತಾಲ್ಲೂಕಿನ ಕೂಡಿ ಮತ್ತು ಕೂರಂಬಳ್ಳಿಯ ಎರಡು ಸರ್ವೆ ನಂಬರ್​ಗಳಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಹೈಕೋರ್ಟ್ ಕೇಂದ್ರದ ಅನುಮತಿ ಪಡೆದಿಲ್ಲವೆಂದು ಹೇಳಿದೆ.




ಆದರೆ, ಸರ್ಕಾರ 56 ಡಿನೋಟಿಫಿಕೇಶನ್ ಖುಲ್ಲಾ ಮಾಡಿದೆ. ಕಾನೂನು ಮಾಡಿ ಶರಾವತಿ ಸಂತ್ರಸ್ತರನ್ನು ಕಾಡಿನಲ್ಲಿ ಕೂರಿಸಿದ್ದೇ ಸರ್ಕಾರ. ಆದರೆ ಈಗ ಸರ್ಕಾರ ಡಿನೋಟಿಫಿಕೇಶನ್ ರದ್ದುಗೊಳಿಸಿ ಮುಳುಗಡೆ ಸಂತ್ರಸ್ಥರನ್ನು ಅತಂತ್ರಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶರಾವತಿ ಮುಳುಗಡೆ ಸಂತ್ರಸ್ತರು ಅತಂತ್ರರಾಗಲು ಸೊರಬ ಹಾಗೂ ಸಾಗರ ಶಾಸಕರೇ ನೇರ ಕಾರಣರಾಗಿದ್ದಾರೆ. ಅವರು ಸರಿಯಾಗಿ ಸಂತ್ರಸ್ತರ ಪರವಾಗಿ ನಿಲ್ಲದೆ ಇರುವುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. ಶರಾವತಿ ಸಂತ್ರಸ್ತರಿಗೆ ಅನ್ಯಾಯ ಮಾಡಿರುವ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.

ಶೀಘ್ರದಲ್ಲೇ ಹೋರಾಟ:

ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಸಿಗುವ ತನಕ ಕಾಂಗ್ರೆಸ್ ಬಹುದೊಡ್ಡ ಹೋರಾಟ ಹಮ್ಮಿಕೊಳ್ಳಲಿದೆ. ಶರಾವತಿ ಸಂತ್ರಸ್ಥರ ಸಮಸ್ಯೆಯನ್ನು ಬಿಜೆಪಿ ಸರ್ಕಾರ ದ್ವಿಗುಣಗೊಳಿಸುತ್ತಿದೆ. ಅರಣ್ಯ ಅಧಿಕಾರಿಗಳು ಸಂತ್ರಸ್ಥರಿಗೆ ನೋಟಿಸ್ ನೀಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಸುಮಾರು 18 ಸಾವಿರಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗಿವೆ. ಇನ್ನು ನಾವು ಸುಮ್ಮನಿರುವುದಿಲ್ಲ. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಒಳಗೊಂಡಂತೆ ಬಹುದೊಡ್ಡ ಹೋರಾಟ ಪ್ರಾರಂಭಿಸುತ್ತೇವೆ ಎಂದರು.




ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಬಿ. ಪ್ರಸನ್ನಕುಮಾರ್, ಬಿ.ಎ.ರಮೇಶ್ ಹೆಗ್ಡೆ, ಎನ್.ಪಿ. ಧರ್ಮರಾಜ್, ರಮೇಶ್ ಶಂಕರಘಟ್ಟ, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ರಮೇಶ್ ಇಕ್ಕೇರಿ, ವಿಜಯಕುಮಾರ್, ಚಂದ್ರಶೇಖರ್, ಹೆಚ್.ಆರ್. ಮಹೇಂದ್ರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Exit mobile version