ರಿಪ್ಪನ್‌ಪೇಟೆ : ಇದೇ 28 ರಂದು ಅಯನೂರಿನಿಂದ ಶಿವಮೊಗ್ಗಕ್ಕೆ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನಾಕ್ರೋಶ ಪಾದಯಾತ್ರೆ ಹಾಗೂ ಬೃಹತ್ ಸಮಾವೇಶವನ್ನು ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.
ಉಳುವವನೇ ಹೊಲದೊಡೆಯ ಹೋರಾಟದ ಹಿನ್ನಲೆಯ ರಾಜ್ಯದ ಹಿರಿಯ ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಜನಾಕ್ರೋಶ ಪಾದಯಾತ್ರೆ ಕುರಿತು ಬೆಳ್ಳೂರು, ಅರಸಾಳು ಹಾಗೂ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ದ್ವಂದ್ವ ನಿಲುವಿನಿಂದ ಶರಾವತಿ ಸಂತ್ರಸ್ತರು ಅತಂತ್ರ ಸ್ಥಿತಿಯನ್ನು ತಲುಪಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಬಗರ್‌ಹುಕುಂ ರೈತರ ಮತ್ತು ಶರಾವತಿ ಮುಳಗಡೆ ಸಂತ್ರಸ್ಥ ರೈತರಿಗೆ ಭೂ ಒಡೆತನ ನೀಡುವ ಮದನ್ ಗೋಪಾಲ್ ವರದಿಯ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಮಲೆನಾಡಿನ ರೈತರ ಜನಾಕ್ರೋಶಕ್ಕೆ ಬಿಜೆಪಿ ಪಕ್ಷ ಗುರಿಯಾಗಿದೆ.
ದೈನಂದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಈ ಎಲ್ಲಾ ಅಂಶಗಳಿಂದ ಡಬ್ಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯಲು ಜನ ಪಣತೊಟ್ಟಿದ್ದಾರೆ,ಜನಸಾಮಾನ್ಯರು ಈ ಪಾದಯಾತ್ರೆಗೆ ಬೆಂಬಲ ನೀಡುವುದರ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕಾಗಿದೆ,ಎಲ್ಲಾರು ಸ್ವಯಂಪ್ರೇರಿತವಾಗಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಈ ಜನಾಕ್ರೋಶ ಪಾದಯಾತ್ರೆ ಕಾರ್ಯಕ್ರಮಕ್ಕೆ ಕೆರೆಹಳ್ಳಿ – ಹೊಂಬುಜ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಜನ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ ಪಿ ರಾಮಚಂದ್ರ,ಜಿಲ್ಲಾ ಮುಖಂಡ ಅಮೀರ್ ಹಂಜಾ,ಈಶ್ವರಪ್ಪ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಮಧುಸೂದನ್, ಆಸಿಫ್ ಭಾಷಾಸಾಬ್, ಗಣಪತಿ, ಪ್ರಕಾಶ್ ಪಾಲೇಕರ್ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.