ರಿಪ್ಪನ್ ಪೇಟೆ ; ಹೊಸನಗರ ತಾಲೂಕಿನ ಹುಂಚ ಹೋಬಳಿಯ ಹಡ್ಲುಬೈಲಿನ ಜೀವನ್ ಎಂಬವರ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ದುಂಡಾವರ್ತನೆಯನ್ನು ಖಂಡಿಸಿ ಮಂಗಳವಾರ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಮನೆ ನೆಲಸಮಗೊಂಡ ಜಾಗದಿಂದ ಹೊಂಬುಜ ನಾಡ ಕಚೇರಿಯವರೆಗೆ ಸುಮಾರು 7ಕಿಲೋ ಮೀಟರ್ (ನಡಿಗೆ ) ಪಾದಯಾತ್ರೆ ನಡೆಸಿದರು.
ತದ ನಂತರ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು
ರಾಜ್ಯ ಸರ್ಕಾರ ನಿವೇಶನ ರಹಿತ ಬಡವರಿಗೆ ಮನೆ ನಿರ್ಮಿಸಿಕೊಡಬೇಕು.ಇದು ನಿಯಮ.ಈಗಿನ ಬಿಜೆಪಿ ಸರ್ಕಾರ ಬಡತನ ಹತ್ತಿಕ್ಕುವ ಬದಲು ಬಡವರ ಬದುಕಿನ ಆಶ್ರಯ ಸೌಧಗಳನ್ನು ಕೆಡವಿ ಹಾಕಿ ಕಡು ಬಡವರನ್ನೇ ಸಂಪೂರ್ಣ ನಿರ್ನಾಮ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.ಸರ್ಕಾರದ ಈ ನಡೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಕಟುವಾಗಿ ಟೀಕಿಸಿದರು.
ಹಡ್ಲು ಬೈಲು ಗ್ರಾಮದ ಸರ್ವೇ ನಂಬರ್ 101 ರಲ್ಲಿ ಜೀವನ್ ಕುಟುಂಬಸ್ಥರು ವಿದ್ಯುತ್ ಸಂಪರ್ಕ ಪಡೆದು ನಿರ್ಮಿಸಿದ ಮನೆಯನ್ನು ಕಂದಾಯ ಅಧಿಕಾರಿಗಳು ಏಕಾಏಕಿ ಅಕ್ರಮ ಒತ್ತುವರಿ ಎಂದು ಜೆಸಿಬಿ ಯಂತ್ರ ಬಳಸಿ ನೆಲಸಮಗೊಳಿಸಿದ ಕ್ರಮ ಖಂಡನೀಯ ,ಸರ್ಕಾರ ತಕ್ಷಣ ಕಂದಾಯ ಭುಮಿಯನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು .
ಈ ಪಾದಯಾತ್ರೆಯಲ್ಲಿ ಮನೆಯನ್ನು ಕಳೆದುಕೊಂಡ ಜೀವನ್ ಕುಟುಂಬದವರು ಕೆಪಿಸಿಸಿ ಕಾರ್ಯದರ್ಶಿ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಪಂ ಮಾಜಿ ಸದಸ್ಯ ಎರಗಿ ಉಮೇಶ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಮುಡುಬ ರಾಘವೇಂದ್ರ, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಪುಟ್ಟ ಬಿದ್ಲು ರಾಘವೇಂದ್ರ, ಹುಂಚ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಸುಣ್ಣಕಲ್ಲು ಗುರುರಾಜ್, ಉಲ್ಲಾಸ್ ಕಡಸೂರು ,ಹೊಸಕೊಪ್ಪ ಚೇತನ್, ಹುಲ್ಲತ್ತಿ ದಿನೇಶ್, ರಾಜಶೇಖರ್, ಮಹೇಶ್ ಗೌಡ, ಲೇಖನಮೂರ್ತಿ, ನಾಗರಾಜ ರೆಡ್ಡಿ, ಅನಿಲ್, ಕೇಶವ, ಮಂಜಣ್ಣ, ಸುಮತಿ, ಲಕ್ಷ್ಮಮ್ಮ, ಜ್ಯೋತಿ, ಲೋಲಾಕ್ಷಿ, ಗ್ರಾಮ ಪಂಚಾಯತ್ ಸದಸ್ಯರುಗಳು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್